Ashwaveega News 24×7 ಏಪ್ರಿಲ್ 6 – 2026 : ಬೆಂಗಳೂರು : ಪಡ್ಡೆಹುಲಿ ಚಿತ್ರದ ಮೂಲಕ ಗಮನ ಸೆಳೆದಿರುವ ಶ್ರೇಯಸ್ ಮಂಜು ಅವರಿಗೆ ಹುಟ್ಟುಹಬ್ಬದ ವಿಶೇಷ ಉಡುಗೊರೆಯಾಗಿ ದಿಲ್ದಾರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ನಲ್ಲಿ ಶ್ರೇಯಸ್ ಮಂಜು ಮತ್ತಷ್ಟು ಖಡಕ್ ಆಕ್ಷನ್ ಅವತಾರದಲ್ಲಿ ಮಿಂಚಿದ್ದು, ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಆರಂಭದಿಂದಲೂ ಆಕ್ಷನ್ ಲುಕ್ಕಿನಲ್ಲಿ ಗುರುತಿಸಿಕೊಂಡಿರುವ ಶ್ರೇಯಸ್, ಈ ಬಾರಿ ಮತ್ತೊಂದು ಹಂತದ ಪವರ್ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟೀಸರ್ ವೈರಲ್ ಆಗುತ್ತಿದ್ದು, ಸಿನಿ ಪ್ರೇಮಿಗಳಲ್ಲಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.
ದಿಲ್ದಾರ್ ಚಿತ್ರವನ್ನು ಮಧು ಗೌಡ ಗಂಗೂರ್ ನಿರ್ದೇಶಿಸಿದ್ದು, ಹೊಸ ತಲೆಮಾರಿಗೆ ತಕ್ಕಂತಹ ವಿಭಿನ್ನ ಕಥಾಹಂದರವನ್ನು ಹೊಂದಿದೆ ಎಂದು ಚಿತ್ರತಂಡ ಹೇಳಿದೆ. ಟೀಸರ್ನಲ್ಲೇ ಚಿತ್ರದ ತಂತ್ರಜ್ಞಾನ ಮತ್ತು ಮೇಕಿಂಗ್ ಗುಣಮಟ್ಟ ಸ್ಪಷ್ಟವಾಗಿ ಗೋಚರಿಸಿದೆ.

ಏನ್ಸಿಯೆಂಟ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಡಾ. ಆರ್ ಸಂತೋಷ್ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಕೀರ್ತಿ ಕೃಷ್ಣ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಜೊತೆಗೆ ಸಾಧು ಕೋಕಿಲಾ, ಚಿಲ್ಲರ್ ಮಂಜು ಸೇರಿದಂತೆ ಹಲವಾರು ಹಾಸ್ಯ ಕಲಾವಿದರು ನಟಿಸಿದ್ದಾರೆ.
ಇನ್ನೂ ಖಳನಟರಾಗಿ ಆಂಡ್ರೋ ಅವಿನಾಶ್, ಭಜರಂಗಿ ಲೋಕಿ ಹಾಗೂ ಅರ್ಪಿತ್ ಅಭಿನಯಿಸಿದ್ದು, ಚಿತ್ರಕ್ಕೆ ಹೆಚ್ಚಿನ ತಾಕತ್ತು ತಂದಿದ್ದಾರೆ.
ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಶೀಘ್ರದಲ್ಲೇ ಬಿಡುಗಡೆಯ ದಿನಾಂಕ ಘೋಷಿಸಲು ಸಿದ್ಧತೆ ನಡೆಸಿದೆ. ಹುಟ್ಟುಹಬ್ಬದ ಟೀಸರ್ ಮೂಲಕ ದಿಲ್ದಾರ್ ಚಿತ್ರಕ್ಕೆ ಉತ್ತಮ ಆರಂಭ ಸಿಕ್ಕಿದ್ದು, ಬಾಕ್ಸ್ ಆಫೀಸ್ನಲ್ಲಿ ಹೇಗೆ ಮೆರೆದೀತು ಎಂಬುದನ್ನು ಕಾದು ನೋಡಬೇಕಿದೆ.
