Ashwaveega News 24×7 ಏಪ್ರಿಲ್ 7 – 2026 : ದಾವಣಗೆರೆ : ದಾವಣಗೆರೆ: ಉಪಚುನಾವಣೆಯ ರಣರಂಗದಲ್ಲಿ ರಾಜಕೀಯ ಚಟುವಟಿಕೆಗಳು ತಾರಕಕ್ಕೇರಿದ್ದು, ಬಹಿರಂಗ ಪ್ರಚಾರಕ್ಕೆ ಇಂದು ಸಂಜೆಯೇ ತೆರೆ ಬೀಳಲಿದೆ. ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಕೊನೆಯ ಹಂತದ ಕಸರತ್ತಿನಲ್ಲಿ ತೊಡಗಿಸಿಕೊಂಡಿದ್ದಾರೆ.
ಸಮರ್ಥ್ ಪರ ಕುಟುಂಬದವರೇ ಭರ್ಜರಿ ಪ್ರಚಾರ ನಡೆಸುತ್ತಿದ್ದು, ತಾಯಿ ಹಾಗೂ ಅತ್ತೆಯ ಅಬ್ಬರದ ಮತಬೇಟೆ ಗಮನ ಸೆಳೆಯುತ್ತಿದೆ. ವಿಶೇಷವಾಗಿ, ಶಾಮನೂರು ಕುಟುಂಬದ ಪುತ್ರಿ ಡಾ. ಶೈಲಜಾ ಭಟ್ಟಾಚಾರ್ಯ ಅವರು ಸೋದರಳಿಯ ಸಮರ್ಥ್ ಪರವಾಗಿ ಬಿರುಸಿನ ಕ್ಯಾಂಪೇನ್ ನಡೆಸುತ್ತಿದ್ದಾರೆ.
ಬೂದಾಳ್, ಎಸ್ಪಿಎಸ್ ನಗರ ಹಾಗೂ ದೊಡ್ಡ ಬೂದಿಹಾಳ ಪ್ರದೇಶಗಳಲ್ಲಿ ಪ್ರಚಾರ ನಡೆಸಿದ ಅವರು, “ಸಮರ್ಥ್ ತುಂಬಾ ಮೃದು ಸ್ವಭಾವದ ಹುಡುಗ. ಅವನು ತನ್ನ ಅಜ್ಜ ಶಾಮನೂರು ಶಿವಶಂಕರಪ್ಪ ಅವರಂತೆ ಜನಸೇವೆಗೆ ಮುಂದೆ ಬರುತ್ತಾನೆ” ಎಂದು ಹೇಳಿದರು .
ಇನ್ನಷ್ಟು ಮಾತನಾಡಿದ ಅವರು, “ಸಮರ್ಥ್ ವಿದ್ಯಾವಂತನಾಗಿದ್ದು, ದಾವಣಗೆರೆಯ ಅಭಿವೃದ್ಧಿಗೆ ಶ್ರಮಿಸುವ ಸಾಮರ್ಥ್ಯ ಹೊಂದಿದ್ದಾನೆ. ನನ್ನ ಅಳಿಯನಿಗೆ ಮತ ನೀಡಿ ಆಶೀರ್ವದಿಸಬೇಕು” ಎಂದು ಮತದಾರರಲ್ಲಿ ಮನವಿ ಮಾಡಿದರು.
ಇದರಿಂದ ಉಪಚುನಾವಣೆಯ ಅಂತಿಮ ಹಂತದಲ್ಲಿ ಕುಟುಂಬ ರಾಜಕಾರಣವೂ ಪ್ರಮುಖ ಪಾತ್ರ ವಹಿಸುತ್ತಿದ್ದು, ಮತದಾರರ ಗಮನ ಸೆಳೆಯುತ್ತಿದೆ .
