Ashwaveega News 24×7 ಏಪ್ರಿಲ್ 6 – 2026 : ಬೆಂಗಳೂರು : ನಗರದಲ್ಲಿ ಆಟೋ ಚಾಲಕರಿಗೆ ಎಲ್ಪಿಜಿ ಗ್ಯಾಸ್ ಸಮಸ್ಯೆ ಇನ್ನೂ ಬಗೆಹರಿಯದೇ ಮುಂದುವರಿದಿದ್ದು, ದಿನನಿತ್ಯದ ಜೀವನೋಪಾಯವೇ ಸಂಕಷ್ಟಕ್ಕೀಡಾಗಿದೆ.
ರಾಜಾಜಿನಗರದಲ್ಲಿರುವ ಇಂಡಿಯನ್ ಆಯಿಲ್ ಗ್ಯಾಸ್ ಬಂಕ್ ಮುಂದೆ ಬೆಳಗ್ಗಿನಿಂದಲೇ ಆಟೋ ಚಾಲಕರ ದೀರ್ಘ ಸರದಿ ಕಂಡುಬಂದಿದೆ. ಅರ್ಧ ಕಿಲೋಮೀಟರ್ಗೂ ಹೆಚ್ಚು ದೂರವರೆಗೆ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.
ಗ್ಯಾಸ್ ತುಂಬಿಸಿಕೊಳ್ಳಲು ಚಾಲಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. 3 ರಿಂದ 4 ಗಂಟೆಗಳವರೆಗೆ ಕ್ಯೂನಲ್ಲಿ ನಿಂತರೂ ಸಹ ಎಲ್ಪಿಜಿ ಸಿಗದೇ ಹಿಂತಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಗ್ಯಾಸ್ ಸಿಗದೆ ಇದ್ದರೆ ನಾವು ಹೇಗೆ ಓಡಿಸೋದು ? ಜನರು ಆಟೋ ಸಿಗುತ್ತಿಲ್ಲ ಎಂದು ದೂರಿಕೊಳ್ಳುತ್ತಿದ್ದಾರೆ. ಆದರೆ ನಮಗೆ ಗ್ಯಾಸ್ ಸಿಗುತ್ತಿಲ್ಲ ಎಂಬುದನ್ನು ಯಾರೂ ಗಮನಿಸುತ್ತಿಲ್ಲ,” ಎಂದು ಚಾಲಕರು ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ.
ಈ ಸಮಸ್ಯೆಯಿಂದ ಸಾರ್ವಜನಿಕರಿಗೂ ಪರೋಕ್ಷವಾಗಿ ತೊಂದರೆ ಉಂಟಾಗುತ್ತಿದ್ದು, ಪ್ರಯಾಣಿಕರಿಗೆ ಆಟೋಗಳ ಲಭ್ಯತೆ ಕುಂಠಿತವಾಗಿದೆ. ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಚಾಲಕರು ಆಗ್ರಹಿಸಿದ್ದಾರೆ.
