Ashwaveega News 24×7 ಏಪ್ರಿಲ್ 6 – 2026 : ಬೆಂಗಳೂರು: ರಾಜ್ಯದಲ್ಲಿ ಮತ್ತೆ ಸಾರಿಗೆ ಮುಷ್ಕರದ ಸುಳಿವು ಕೇಳಿಬಂದಿದ್ದು, ನಾಳೆಯಿಂದ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಾರಿಗೆ ನೌಕರರು ಸರ್ಕಾರದ ವಿರುದ್ಧ ಸಮರ ಸಾರಲು ಸಿದ್ಧರಾಗಿದ್ದಾರೆ.
38 ತಿಂಗಳ ಅರಿಯರ್ಸ್ ಬಿಡುಗಡೆ, 2024 ಜನವರಿಯಿಂದಲೇ ವೇತನ ಹೆಚ್ಚಳ ಜಾರಿ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನೌಕರರು ಹೋರಾಟಕ್ಕೆ ಮುಂದಾಗಿದ್ದಾರೆ. ಸುಮಾರು 1970 ಕೋಟಿ ರೂಪಾಯಿ ಹಿಂಬಾಕಿ ಬಿಡುಗಡೆ ಮಾಡುವಂತೆ ಅವರು ಬಿಗಿ ಪಟ್ಟು ಹಿಡಿದಿದ್ದಾರೆ .
ಈ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಲಾಗಿದೆ. ವಿಶೇಷವಾಗಿ ಚಿತ್ರದುರ್ಗದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ವರೆಗೆ ಭಾರಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಸಾವಿರಾರು ನೌಕರರು ಭಾಗವಹಿಸುವ ನಿರೀಕ್ಷೆಯಿದೆ.
ಸರ್ಕಾರದ ವಿರುದ್ಧ ಸೆಡ್ಡು ಹೊಡೆಯಲು ಮುಂದಾದ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೂ ಸಜ್ಜಾಗಿದ್ದು, ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆಯೂ ವ್ಯಕ್ತವಾಗಿದೆ. ಇದರಿಂದ ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಂಡುಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಸರ್ಕಾರ ಮತ್ತು ನೌಕರರ ನಡುವೆ ಮಾತುಕತೆ ಫಲಿಸದಿದ್ದರೆ, ಈ ಮುಷ್ಕರ ರಾಜ್ಯದ ಸಾರಿಗೆ ವ್ಯವಸ್ಥೆಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ .
