Ashwaveega News 24×7 ಏಪ್ರಿಲ್ 8 – 2026 : ಅಮೆರಿಕ ಮತ್ತು ಇರಾನ್ ನಡುವೆ ಉಂಟಾಗಿದ್ದ ಉದ್ವಿಗ್ನ ಯುದ್ಧ ಪರಿಸ್ಥಿತಿಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ. ಸುಮಾರು 40 ದಿನಗಳ ಕಾಲ ಮುಂದುವರಿದ ಕೊಲ್ಲಿ ಕದನಕ್ಕೆ ಇದೀಗ ಎರಡು ವಾರಗಳ ವಿರಾಮ ಘೋಷಿಸಲಾಗಿದೆ.
ಭೀಕರ ದಾಳಿಯ ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಯ ಕ್ಷಣದಲ್ಲಿ ಯೂಟರ್ನ್ ತೆಗೆದುಕೊಂಡಿದ್ದು, ಕದನ ವಿರಾಮ ಘೋಷಿಸಿದ್ದಾರೆ. ಕ್ಷಣಕ್ಷಣಕ್ಕೂ ಬದಲಾಗುವ ಅವರ ಹೇಳಿಕೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಇರಾನ್ ನಾಗರಿಕತೆಯನ್ನು ನಾಶ ಮಾಡುತ್ತೇನೆ ಎಂಬ ಕಠಿಣ ಎಚ್ಚರಿಕೆ ನೀಡಿದ್ದ ಟ್ರಂಪ್ ಈಗ ಶಾಂತಿ ಮಾತುಕತೆಗಳತ್ತ ಮುಖ ಮಾಡಿದ್ದಾರೆ.
ಈ ತಾತ್ಕಾಲಿಕ ವಿರಾಮಕ್ಕೆ ಪಾಕಿಸ್ತಾನದ ಮಧ್ಯಸ್ಥಿಕೆ ಪ್ರಮುಖ ಕಾರಣವಾಗಿದ್ದು, ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಯುದ್ಧವನ್ನು ತಡೆಯುವಂತೆ ಮನವಿ ಮಾಡಿದ್ದರೆಂದು ತಿಳಿದುಬಂದಿದೆ.
ಇದಕ್ಕೆ ಪ್ರತಿಯಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಒಪ್ಪಿಕೊಂಡಿದ್ದು, ಇದು ಜಾಗತಿಕ ವಾಣಿಜ್ಯಕ್ಕೆ ಮಹತ್ವದ ಬೆಳವಣಿಗೆಯಾಗಿದೆ. ಅಮೆರಿಕ ಈಗಾಗಲೇ ತನ್ನ ಮಿಲಿಟರಿ ಉದ್ದೇಶಗಳನ್ನು ಪೂರೈಸಿದ್ದಾಗಿ ಹೇಳಿಕೊಂಡಿದ್ದು, ಇರಾನ್ ಕಡೆಯಿಂದ ಬಂದ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಿದೆ.
ಈ ಬೆಳವಣಿಗೆಗಳು ಶಾಶ್ವತ ಶಾಂತಿ ಒಪ್ಪಂದದತ್ತ ಪ್ರಮುಖ ಹೆಜ್ಜೆಯಾಗಿ ಕಾಣಲಾಗುತ್ತಿದ್ದು, ದೀರ್ಘಕಾಲೀನ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ದಿಕ್ಕಿನಲ್ಲಿ ಮಾತುಕತೆಗಳು ಸಾಗುತ್ತಿವೆ.
