Ashwaveega News 24×7 ಏಪ್ರಿಲ್ 8 – 2026 : ಬೈಎಲೆಕ್ಷನ್ ರಾಜಕೀಯ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, 2028ರ ಚುನಾವಣಾ ಟಿಕೆಟ್ಗಾಗಿ ಆಕಾಂಕ್ಷಿಗಳ ನಡುವಿನ ಪೈಪೋಟಿ ಇದೀಗ ಬಹಿರಂಗ ಘರ್ಷಣೆಯಾಗಿ ಮಾರ್ಪಟ್ಟಿದೆ.
ಒಂದೇ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳಾ ನಾಯಕಿಯರಾದ ವೀಣಾ ಕಾಶಪ್ಪನವರ್ ಹಾಗೂ ಸಂಯುಕ್ತ ಪಾಟೀಲ್ ನಡುವಿನ ಅಸಮಾಧಾನ ಇದೀಗ ಬೆಂಬಲಿಗರ ಮಟ್ಟಕ್ಕೂ ವಿಸ್ತರಿಸಿದೆ. ಪಂಚಮಸಾಲಿ ಮುಖಂಡರ ಸಭೆಯಲ್ಲಿಯೇ ಈ ಇಬ್ಬರ ಬೆಂಬಲಿಗರು ಪರಸ್ಪರ ವಾಗ್ವಾದಕ್ಕೆ ಇಳಿದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತು.
ವೀಣಾ ಕಾಶಪ್ಪನವರ್ ಬೆಂಬಲಿಗರು ಸಂಯುಕ್ತ ಪಾಟೀಲ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದು, “ಬಾಗಲಕೋಟೆಗೆ ಸಂಬಂಧ ಇಲ್ಲದವರು ನಮ್ಮ ಕ್ಷೇತ್ರಕ್ಕೆ ಬರೋದು ಏಕೆ ?” ಎಂದು ಪ್ರಶ್ನಿಸಿದ್ದಾರೆ. ಇದರಿಂದ ಎರಡೂ ಪಕ್ಷದ ಬೆಂಬಲಿಗರ ನಡುವೆ ಜಟಾಪಟಿ ನಡೆದಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಸಂಯುಕ್ತ ಪಾಟೀಲ್ ಸ್ಪರ್ಧಿಸಿದ್ದರೆ, ಆ ವೇಳೆ ವೀಣಾ ಕಾಶಪ್ಪನವರ್ ಕಾಂಗ್ರೆಸ್ ಟಿಕೆಟ್ಗಾಗಿ ಆಕಾಂಕ್ಷಿಯಾಗಿದ್ದರು. ಆದರೆ ಅಂತಿಮವಾಗಿ ವೀಣಾಗೆ ಟಿಕೆಟ್ ಸಿಗದೇ, ಸಂಯುಕ್ತ ಪಾಟೀಲ್ಗೆ ಅವಕಾಶ ನೀಡಲಾಗಿತ್ತು. ಇದೇ ಅಸಮಾಧಾನ ಇದೀಗ ಮತ್ತೆ ಮೆಚ್ಚಿಕೊಂಡಂತೆ ಕಾಣುತ್ತಿದೆ.
ಈಗ ಮುಂಬರುವ ವಿಧಾನಸಭೆ ಚುನಾವಣೆಯ ಟಿಕೆಟ್ಗಾಗಿ ಇಬ್ಬರೂ ನಾಯಕಿಯರು ಪೈಪೋಟಿ ನಡೆಸುತ್ತಿರುವ ಹಿನ್ನೆಲೆ, ಬೆಂಬಲಿಗರ ನಡುವೆ ಘರ್ಷಣೆ ಹೆಚ್ಚಾಗಿದೆ. “ಬೇರೆ ಜಿಲ್ಲೆಯವರು ನಮ್ಮ ಕ್ಷೇತ್ರಕ್ಕೆ ಬರಬೇಡಿ” ಎಂಬ ಘೋಷಣೆಗಳೂ ಕೇಳಿಬಂದಿವೆ.
ಮುಖ್ಯಮಂತ್ರಿಗಳ ಸಭೆಯ ಬಳಿಕ ಮುಖಂಡರ ನಡುವೆ ನಡೆದ ಈ ತಿಕ್ಕಾಟ, ಪಕ್ಷದ ಒಳರಾಜಕೀಯಕ್ಕೆ ಹೊಸ ತಿರುವು ನೀಡಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ .
