Ashwaveega News 24×7 ಏಪ್ರಿಲ್ 9 – 2026 : ಅಮೆರಿಕ–ಇರಾನ್ ಸಂಧಾನದ ಹಿಂದೆ ಪಾಕಿಸ್ತಾನ ಅಲ್ಲ, ಚೀನಾ ಪ್ರಮುಖ ಪಾತ್ರ ವಹಿಸಿದೆ ಎಂಬ ಚರ್ಚೆ ಇದೀಗ ಜೋರಾಗಿದೆ. ಜಾಗತಿಕ ರಾಜಕೀಯದಲ್ಲಿ ಬೀಜಿಂಗ್ ಮೌನ ತಂತ್ರ ಬಳಸಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಇರಾನ್ ಕದನ ವಿರಾಮಕ್ಕೆ ಒಪ್ಪಿದ ಹಿನ್ನೆಲೆಯಲ್ಲಿ, ಈ ಸಂಧಾನದ ಸೂತ್ರಧಾರಿ ಯಾರು ಎಂಬ ಕುತೂಹಲ ಹೆಚ್ಚಿದೆ . ಚೀನಾ ಈ ಶಾಂತಿ ಮಾತುಕತೆಗೆ ಮಹತ್ವದ ಪೂರಕವಾಗಿ ಕೆಲಸ ಮಾಡಿದೆ ಎನ್ನಲಾಗುತ್ತಿದೆ.
ಇರಾನ್ನ ಪ್ರಮುಖ ವ್ಯಾಪಾರ ಪಾಲುದಾರರಾಗಿರುವ ಚೀನಾ, ಯುದ್ಧ ಆರಂಭದಿಂದಲೂ ಶಾಂತಿ ಸ್ಥಾಪನೆಗೆ ಒತ್ತು ನೀಡುತ್ತ ಬಂದಿದೆ. ಸಂಧಾನ ಮಾತುಕತೆ ಸಂದರ್ಭದಲ್ಲಿ ಚೀನಾ ಅಧಿಕಾರಿಗಳು ನಿರಂತರವಾಗಿ ಇರಾನ್ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ .
ಆದರೆ ಪ್ರಾರಂಭದಲ್ಲಿ ಚೀನಾ ಮಾತಿಗೆ ಇರಾನ್ ಅಧಿಕಾರಿಗಳು ತಕ್ಷಣ ಒಪ್ಪದಿದ್ದರೂ, ಕದನ ವಿರಾಮದ ಅಗತ್ಯತೆ ಮತ್ತು ಅದರ ಪರಿಣಾಮಗಳ ಬಗ್ಗೆ ವಿವರಿಸಿದ ನಂತರ ಪರಿಸ್ಥಿತಿ ಬದಲಾಗಿದೆ ಎನ್ನಲಾಗುತ್ತಿದೆ.
ಇದರ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇ ತಿಂಗಳಲ್ಲಿ ಚೀನಾ ಭೇಟಿ ಮಾಡುವ ನಿರೀಕ್ಷೆ ಇದ್ದು, ಅದಕ್ಕೂ ಮುನ್ನ ಕದನ ವಿರಾಮ ಸಾಧನೆ ಆಗಿರುವುದು ರಾಜಕೀಯವಾಗಿ ಮಹತ್ವ ಪಡೆದಿದೆ.
ಗಮನಾರ್ಹ ಅಂಶವೆಂದರೆ, ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಚೀನಾ ತನ್ನ ಪಾತ್ರದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಇರಾನ್ ಸಂಧಾನದ ಹಿಂದೆ ಚೀನಾ ಪ್ರಭಾವವಿದೆ ಎಂಬ ಚರ್ಚೆ ಅಂತಾರಾಷ್ಟ್ರೀಯ ವಲಯದಲ್ಲಿ ಮುಂದುವರಿದಿದೆ.
ಒಟ್ಟಾರೆ, ಜಾಗತಿಕ ರಾಜಕೀಯದಲ್ಲಿ ಮೌನ ರಾಜತಾಂತ್ರಿಕತೆ ಮೂಲಕ ಚೀನಾ ತನ್ನ ಪ್ರಭಾವ ವಿಸ್ತರಿಸುತ್ತಿದೆಯೇ ಎಂಬ ಪ್ರಶ್ನೆ ಈಗ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.
