Ashwaveega News 24×7 ಏಪ್ರಿಲ್ 9 – 2026 : ದಾವಣಗೆರೆ : ದಾವಣಗೆರೆ ಬೈಎಲೆಕ್ಷನ್ ಅಖಾಡದಲ್ಲಿ ಮತದಾನ ಪ್ರಕ್ರಿಯೆ ನಡುವೆ ಅಚ್ಚರಿ ಘಟನೆ ನಡೆದಿದೆ. ಹಳೆಪೇಟೆಯಲ್ಲಿರುವ ಮತಗಟ್ಟೆ ಸಂಖ್ಯೆ 66ರಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (EVM) ತಾಂತ್ರಿಕ ದೋಷದಿಂದ ಕಾರ್ಯನಿರ್ವಹಿಸದೇ ಇರುವುದರಿಂದ ಮತದಾರರಿಗೆ ತಾತ್ಕಾಲಿಕ ತೊಂದರೆ ಉಂಟಾಗಿದೆ.
ಬೆಳಗ್ಗಿನಿಂದಲೇ ಮತದಾನಕ್ಕೆ ಆಗಮಿಸಿದ್ದ ಮತದಾರರು ತಮ್ಮ ಹಕ್ಕು ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದರೂ, ಯಂತ್ರದ ದೋಷದಿಂದ ಮತದಾನ ಪ್ರಕ್ರಿಯೆ ಕೆಲಕಾಲ ಸ್ಥಗಿತಗೊಂಡಿತು . ಈ ಬೆಳವಣಿಗೆ ಮತದಾರರಲ್ಲಿ ಅಸಮಾಧಾನಕ್ಕೂ ಕಾರಣವಾಯಿತು.
ಮತಗಟ್ಟೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ EVM ಪರಿಶೀಲನೆ ನಡೆಸುತ್ತಿದ್ದು, ಸಮಸ್ಯೆಯನ್ನು ಶೀಘ್ರದಲ್ಲಿ ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅಗತ್ಯವಿದ್ದಲ್ಲಿ ಪರ್ಯಾಯ ಯಂತ್ರವನ್ನು ಬಳಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ .
ಈ ನಡುವೆ ಭದ್ರತಾ ಸಿಬ್ಬಂದಿ ಸ್ಥಳದಲ್ಲಿ ಕಾವಲು ನಿಂತಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿರಿಸಲು ಕ್ರಮ ಕೈಗೊಳ್ಳಲಾಗಿದೆ. ಮತದಾನ ಪ್ರಕ್ರಿಯೆ ಶೀಘ್ರದಲ್ಲೇ ಪುನರಾರಂಭವಾಗುವ ನಿರೀಕ್ಷೆಯಿದೆ .
