Ashwaveega News 24×7 ಏಪ್ರಿಲ್ 9 – 2026 : ಕರ್ನಾಟಕ ದ್ವಿತೀಯ ಪಿಯುಸಿ (PUC) ಫಲಿತಾಂಶ ಇಂದು ಪ್ರಕಟವಾಗಿದ್ದು, ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು karresults.nic.in ವೆಬ್ಸೈಟ್ನಲ್ಲಿ ಪರಿಶೀಲಿಸಬಹುದು. ಕರ್ನಾಟಕ ಒನ್ ಆಪ್ ಮೂಲಕವೂ ಫಲಿತಾಂಶ ಲಭ್ಯವಿದ್ದು, ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಹಾಗೂ ವಾಟ್ಸಪ್ ಮೂಲಕವೂ ಮಾಹಿತಿ ರವಾನೆಯಾಗುತ್ತಿದೆ. ಇದೇ ಮೊದಲ ಬಾರಿಗೆ ಡಿಜಿ ಲಾಕರ್ನಲ್ಲೂ ಫಲಿತಾಂಶ ಲಭ್ಯವಾಗಿರುವುದು ವಿಶೇಷ.
ವಿದ್ಯಾರ್ಥಿಗಳು ತಕ್ಷಣವೇ ತಮ್ಮ ಫಲಿತಾಂಶವನ್ನು ಪರಿಶೀಲಿಸಿ ಮುಂದಿನ ವಿದ್ಯಾಭ್ಯಾಸದ ಯೋಜನೆ ರೂಪಿಸಿಕೊಳ್ಳಲು ಸೂಚಿಸಲಾಗಿದೆ. ಇಂದು ಸಂಜೆ 6:15ಕ್ಕೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಪ್ರೆಸ್ಮೀಟ್ ನಡೆಸಿ, ಫಲಿತಾಂಶದ ಸಂಪೂರ್ಣ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ. ಯಾವ ಜಿಲ್ಲೆ ಮೊದಲ ಸ್ಥಾನ ಪಡೆದಿದೆ, ಯಾವ ಜಿಲ್ಲೆ ಹಿನ್ನಡೆ ಅನುಭವಿಸಿದೆ ಸೇರಿದಂತೆ ಹಲವು ಅಂಕಿ-ಅಂಶಗಳನ್ನು ಪ್ರಕಟಿಸಲಿದ್ದಾರೆ.
ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆದಿದ್ದ ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ದಾಖಲೆ ಮಟ್ಟದ ಫಲಿತಾಂಶ ಕಂಡುಬಂದಿದೆ. ಈ ಬಾರಿ ಒಟ್ಟು ಶೇಕಡಾ 86ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷದ 73.45% ಫಲಿತಾಂಶಕ್ಕಿಂತ ಗಣನೀಯ ಏರಿಕೆ ಕಂಡಿದೆ. ಸುಮಾರು 12.5% ಹೆಚ್ಚು ಫಲಿತಾಂಶ ದಾಖಲಾಗಿದ್ದು, ಪರೀಕ್ಷೆಗೆ ಹಾಜರಾದವರ ಪೈಕಿ 6 ಲಕ್ಷ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಇನ್ನು ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ 600ಕ್ಕೆ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಸಾಧನೆ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಒಟ್ಟಾರೆ, ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶ ರಾಜ್ಯದಲ್ಲಿ ಸಂಭ್ರಮದ ವಾತಾವರಣ ನಿರ್ಮಿಸಿದ್ದು, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಲ್ಲಿ ಸಂತಸ ಮೂಡಿಸಿದೆ.
