Ashwaveega News 24×7 ಏಪ್ರಿಲ್ 13 – 2026 : ಬೆಂಗಳೂರು/ನವದೆಹಲಿ : ರಾಜ್ಯ ಕಾಂಗ್ರೆಸ್ ಪಡೆಯಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ಜೋರಾಗಿದ್ದು, ಪಕ್ಷದೊಳಗೆ ಅಸಮಾಧಾನವೂ ತಲೆದೋರಿದೆ. 30ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ಮೇಲೆ ಒತ್ತಡ ಹಾಕಲು ಮುಂದಾಗಿದ್ದಾರೆ.
ಈ ದಂಡಯಾತ್ರೆಗೆ ಶಾಸಕ ಅಶೋಕ್ ಪಟ್ಟಣ್ ನೇತೃತ್ವ ವಹಿಸಿದ್ದಾರೆ. ಸಚಿವ ಸ್ಥಾನಕ್ಕಾಗಿ ಒತ್ತಾಯಿಸುವುದು ಮುಖ್ಯ ಉದ್ದೇಶವಾಗಿದ್ದು, ಕ್ಯಾಬಿನೆಟ್ ಪುನರ್ರಚನೆಗೆ ಒತ್ತಾಯ ಹೆಚ್ಚಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಸಚಿವ ಸಂಪುಟದಲ್ಲಿ ಬದಲಾವಣೆ ಅನಿವಾರ್ಯ ಎಂಬ ಅಭಿಪ್ರಾಯ ಶಾಸಕರಲ್ಲಿದೆ. ಹಲವು ಬಾರಿ ಗೆದ್ದ ಅನುಭವಿ ಶಾಸಕರಿಗೂ ಸಚಿವ ಸ್ಥಾನ ನೀಡಬೇಕು ಎಂಬುದು ಅವರ ಮುಖ್ಯ ಬೇಡಿಕೆಯಾಗಿದೆ .
“ಕ್ಯಾಬಿನೆಟ್ ರಿಷಫಲ್ ಮಾಡಬೇಕು ಎಂಬುದೇ ನಮ್ಮ ಏಕೈಕ ಅಜೆಂಡಾ. ಹಿರಿಯ ಶಾಸಕರಿಗೆ ಅವಕಾಶ ನೀಡಬೇಕು,” ಎಂದು ಶಾಸಕರು ಒತ್ತಾಯಿಸುತ್ತಿದ್ದಾರೆ.
ದೆಹಲಿಯಲ್ಲಿ 3-4 ದಿನ ಉಳಿದು, ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುವ ಯೋಜನೆ ರೂಪಿಸಲಾಗಿದೆ.
ಇದರ ಮಧ್ಯೆ, ಈ ದೆಹಲಿ ಪ್ರವಾಸಕ್ಕೆ ಸಿಎಂ ಅನುಮತಿ ಇದೆಯೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ. ಆದರೆ ಶಾಸಕರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಕ್ಯಾಬಿನೆಟ್ ಪುನರ್ರಚನೆ ಚರ್ಚೆಗಳು ಜೋರಾಗುತ್ತಿರುವ ಹಿನ್ನೆಲೆ, ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಹೊಸ ಚಲನವಲನಗಳು ಕಂಡುಬರುತ್ತಿವೆ.
