Ashwaveega News 24×7 ಏಪ್ರಿಲ್ 13 – 2026 : ದಾವಣಗೆರೆ/ಹರಿಹರ : ಹರಿಹರ ಪಂಚಮಸಾಲಿ ಮಠದ ಬಳಿ ಭಾರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಠದ ಸುತ್ತಮುತ್ತ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಮಠದ ಟ್ರಸ್ಟ್ ಸದಸ್ಯರ ಸಭೆ ಹಿನ್ನೆಲೆಯಲ್ಲಿ ಈ ನಿಷೇಧಾಜ್ಞೆ ಜಾರಿಯಾಗಿದ್ದು, ಹಲವು ಸದಸ್ಯರನ್ನು ಹೊರಗಿಟ್ಟು ಸಭೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಮಠದ ದೇಣಿಗೆ ಹಣ ಹಾಗೂ ಸರ್ಕಾರ ನೀಡಿರುವ 15 ಕೋಟಿ ರೂಪಾಯಿಗಳ ಲೆಕ್ಕ ನೀಡುವಂತೆ ಪಂಚಮಸಾಲಿ ಮುಖಂಡರು ಒತ್ತಾಯಿಸಿದ್ದಾರೆ.
ಸಭೆಗೆ ಪ್ರವೇಶಿಸಲು ಯತ್ನಿಸಿದ ಮುಖಂಡರನ್ನು ಪೊಲೀಸರು ಮಠದ ಗೇಟ್ ಬಳಿ ತಡೆದಿದ್ದು, ಇದರಿಂದ ಆಕ್ರೋಶಗೊಂಡ ಮುಖಂಡರು ಪೊಲೀಸರ ವಿರುದ್ಧ ವಾಗ್ವಾದಕ್ಕೆ ಇಳಿದರು. ಈ ವೇಳೆ ತಳ್ಳಾಟ-ನೂಕಾಟವೂ ನಡೆದಿದೆ.
ಈ ನಡುವೆ ಮಠದ ಆಡಳಿತಾಧಿಕಾರಿ ರಾಜಕುಮಾರ್ ಅವರನ್ನು ಹೊರಗಿಟ್ಟು ಟ್ರಸ್ಟಿಗಳ ಸಭೆ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಇದನ್ನು ಖಂಡಿಸಿ ಆಡಳಿತಾಧಿಕಾರಿ ಹಾಗೂ ಭಕ್ತರು ಮಠದ ಎದುರು ಧರಣಿ ನಡೆಸಿದರು.
ಪ್ರತಿಭಟನೆಗೆ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ನೇತೃತ್ವ ವಹಿಸಿದ್ದು, “ಹರ ಹರ ಮಹಾದೇವ… ನ್ಯಾಯ ಬೇಕು” ಎಂದು ಘೋಷಣೆ ಕೂಗಿದರು. ಮಠದ ಒಳಗೆ ಬಿಡುವಂತೆ ಭಕ್ತರು ಆಗ್ರಹಿಸಿದರು.
ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಮಠದ ಸುತ್ತ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಅಲ್ಲದೆ, ಸಭೆಯನ್ನು ಮುಂದೂಡುವಂತೆ ಟ್ರಸ್ಟಿಗಳಿಗೆ ಪೊಲೀಸರು ನೋಟಿಸ್ ನೀಡಿರುವ ಮಾಹಿತಿ ಲಭ್ಯವಾಗಿದೆ.
ಈ ಘಟನೆಯಿಂದ ಹರಿಹರ ಪಂಚಮಸಾಲಿ ಪೀಠದ ಒಳಜಗಳ ತಾರಕಕ್ಕೇರಿದ್ದು, ಮುಂದಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.
