Ashwaveega News 24×7 ಏಪ್ರಿಲ್ 14 – 2026 : ರಾಜ್ಯ ರಾಜಕೀಯದಲ್ಲಿ ಮತ್ತೆ ಸಂಪುಟ ಪುನಾರಚನೆ ಸದ್ದು ಜೋರಾಗಿದೆ. ಮೇ 15ರೊಳಗೆ ಸಂಪುಟ ರೀಶಫಲ್ ನಡೆಯುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ಸಚಿವ ಸ್ಥಾನಾಕಾಂಕ್ಷಿಗಳ ಒತ್ತಡದ ನಡುವೆ, ಹೈಕಮಾಂಡ್ ಕೂಡ ಮಹತ್ವದ ನಿರ್ಧಾರಕ್ಕೆ ಸಜ್ಜಾಗಿದೆ ಎನ್ನಲಾಗುತ್ತಿದೆ.
ಹಿರಿಯ ನಾಯಕ Mallikarjun Kharge ಅವರನ್ನು ಭೇಟಿ ಮಾಡಲು ಶಾಸಕರ ದಂಡು ದೆಹಲಿಯತ್ತ ಮುಖ ಮಾಡಿದೆ. Ashok Pattan ನೇತೃತ್ವದಲ್ಲಿ 15ಕ್ಕೂ ಹೆಚ್ಚು ಶಾಸಕರು ದೆಹಲಿಯಲ್ಲಿ ತಂಗಿದ್ದು, ಮೂರು ದಿನಗಳ ಕಾಲ ಸತತ ಮಾತುಕತೆ ನಡೆಸಿದ್ದಾರೆ.
ಆದರೆ ಪ್ರಮುಖ ನಾಯಕ Rahul Gandhi ಅವರ ಅಪಾಯಿಂಟ್ಮೆಂಟ್ ಸಿಗುವುದು ಕಷ್ಟವಾಗಿರುವ ಹಿನ್ನೆಲೆ, ಶಾಸಕರ ಭೇಟಿಗಳು ಖರ್ಗೆ ಮತ್ತು Randeep Singh Surjewala ಮಟ್ಟಕ್ಕೆ ಮಾತ್ರ ಸೀಮಿತವಾಗಿವೆ ಎಂದು ತಿಳಿದುಬಂದಿದೆ.
ಸಂಪುಟ ಪುನಾರಚನೆ ವೇಳೆ ಹಳೇ ಸಚಿವರಿಗೆ ಗೇಟ್ಪಾಸ್ ನೀಡಲಾಗುತ್ತದೆಯೇ? ಹೊಸ ಮುಖಗಳಿಗೆ ಅವಕಾಶ ಸಿಗುತ್ತದೆಯೇ ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ಹೈಕಮಾಂಡ್ ಈ ಬಾರಿ ಸಮತೋಲನ ಸಾಧಿಸಲು ಹೊಸಬರಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ದೆಹಲಿಯಲ್ಲಿ ನಡೆದ ಮಾತುಕತೆಗಳ ಬಳಿಕ ಶಾಸಕರು ಸಿಹಿಸುದ್ದಿಯೊಂದಿಗೆ ರಾಜ್ಯಕ್ಕೆ ಮರಳುತ್ತಾರಾ? ಅಥವಾ ನಿರಾಸೆಯಿಂದ ವಾಪಸ್ ಆಗುತ್ತಾರಾ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬೆಳವಣಿಗೆ ರಾಜ್ಯ ಕಾಂಗ್ರೆಸ್ನಲ್ಲಿ ಹೊಸ ರಾಜಕೀಯ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಮಹತ್ವದ ತೀರ್ಮಾನಗಳು ಹೊರಬರುವ ನಿರೀಕ್ಷೆಯಿದೆ.
ಒಟ್ಟಾರೆ , ಸಂಪುಟ ಪುನಾರಚನೆಗೆ ಮುಹೂರ್ತ ಫಿಕ್ಸ್ ಆಗಿದೆಯೇ ಎಂಬ ಕುತೂಹಲ ಹೆಚ್ಚಾಗಿದ್ದು, ಶಾಸಕರ ನಡೆ ರಾಜ್ಯ ರಾಜಕೀಯದಲ್ಲಿ ಹೊಸ ತಿರುವು ತರುವ ಸಾಧ್ಯತೆ ಇದೆ .
