
ಬೆಂಗಳೂರು : JP ನಗರ ಪೊಲೀಸರಿಂದ ನಾಲ್ವರು ಖತರ್ನಾಕ್ ಮಹಿಳೆಯರ ಬಂಧನವಾಗಿದೆ. ಪೊನ್ನೂರು ಮಲ್ಲಿ, ವೆಂಕಟೇಶ್ವರಮ್ಮ, ಮಾಧುಗನಿ ಜಾನಕಿ, ಹಾಗೂ ಮೇಧಾ ರಜನಿ ಬಂಧಿತ ಆರೋಪಿಗಳು. ಈ ಮಹಿಳೆಯರು ಆಂಧ್ರಪ್ರದೇಶ ಮೂಲದವರಾಗಿದ್ದು, ಬೆಂಗಳೂರಿನ ಪ್ರತಿಷ್ಠಿತ ಸೀರೆ ಅಂಗಡಿಗಳಾದ ನಲ್ಲಿಯ, ಚಿನ್ಮಯಿ, ಹಾಗೂ ಮುಗ್ಧ ಸೀರೆ ಅಂಗಡಿಗಳಲ್ಲಿ ಕೈಚಳಕ ತೋರಿದ್ದರು. ಶ್ರೀಮಂತ ಮಹಿಳೆಯರಂತೆ ಸೀರೆ ಅಂಗಡಿಗಳಿಗೆ ಬಂದು, ಖರೀದಿ ನೆಪದಲ್ಲಿ ಗಮನ ಬೇರೆಡೆ ಸೆಳೆದು, ಲಕ್ಷಾಂತರ ರೂ. ಮೌಲ್ಯದ ಸೀರೆಗಳನ್ನು ಎಗರಿಸುತ್ತಿದ್ದರು.
ನಾಲ್ವರು ಮಹಿಳೆಯರು ಜೆಪಿ ನಗರ ವ್ಯಾಪ್ತಿಯ ಸಿಲ್ಕ್ ಹೌಸ್ ಅಂಗಡಿಯಲ್ಲಿ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ. ವಿಚಾರಣೆಯಲ್ಲಿ ಇಡೀ ಗ್ಯಾಂಗ್ನ ಕಹಾನಿ ಬಯಲಾಗಿದ್ದು, ಇವರಿಂದ 17.5 ಲಕ್ಷ ಮೌಲ್ಯದ 38 ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ. ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



