
ಭಾರತದ ಆರಂಭಿಕ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಕೈ ಬೆರಳಿಗೆ ಗಾಯ ಆಗಿದ್ದು 5-6 ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇಂಗ್ಲೆಂಡ್ ತಂಡದ ವಿರುದ್ದ ನಡೆದ 5ನೇ ಟಿ-20 ಪಂದ್ಯದಲ್ಲಿ ಜೋಫ್ರಾ ಆರ್ಚರ್ ಎಸೆದ ಚೆಂಡು ನೇರವಾಗಿ ಸಂಜು ಕೈಗೆ ಬಿದ್ದಿತ್ತು. ತಕ್ಷಣವೇ ತಂಡದ ಫಿಸಿಯೋ ಮೈದಾನ ಪ್ರವೇಶಿಸಿ ಗಾಯದ ತೀವ್ರತೆಯನ್ನು ಪರಿಶೀಲಿಸಿದ್ದರು. ಗಾಯದ ನಡುವೆಯೇ ಕೆಲಹೊತ್ತು ಬ್ಯಾಟಿಂಗ್ ನಡೆಸಿ ಸಂಜು ಸ್ಯಾಮ್ಸನ್ ಔಟ್ ಆಗಿದ್ದರು. ಬಳಿಕ ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ವಿಕೆಟ್ ಕೀಪಿಂಗ್ ಮಾಡಲು ಬಂದ ಸಂಜುಗೆ ಗಾಯದ ನೋವು ಮತ್ತೆ ಕಾಣಿಸಿಕೊಂಡಿತ್ತು

ಕೂಡಲೇ ವಿಕೆಟ್ ಕೀಪಿಂಗ್ ಗ್ಲೌಸ್ ಅನ್ನು ಧ್ರುವ್ ಜುರೆಲ್ಗೆ ನೀಡಿದ್ದರು. ಮಾಹಿತಿಗಳ ಪ್ರಕಾರ ಸ್ಯಾಮ್ಸನ್ನ ಬಲಗೈ ತೋರುಬೆರಳು ಮುರಿದಿದೆ. ಬೆರಳನ್ನು ಸ್ಕ್ಯಾನ್ ಮಾಡಿದಾಗ ಬೆರಳು ಮುರಿದಿರುವುದು ಪತ್ತೆಯಾಗಿದೆ.. ಹೀಗಾಗಿ ಮುಂದಿನ 5-6 ವಾರಗಳ ಕಾಲ ಸಂಜುಗೆ ವಿಶ್ರಾಂತಿ ಅಗತ್ಯವಿದ್ದು ರಣಜಿ ಸೇರಿದಂತೆ ಹಲವು ಪಂದ್ಯಗಳಿಗೆ ಸಂಜು ಸ್ಯಾಮ್ಸನ್ ಮಿಸ್ ಆಗಲಿದ್ದಾರೆ. ಮುಂದಿನ ತಿಂಗಳು ಐಪಿಎಲ್ ಶುರುವಾಗುವ ವೇಳೆಗೆ ಸಂಜು ಸ್ಯಾಮ್ಸನ್ ಗಾಯದಿಂದ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಐಪಿಎಲ್ನಲ್ಲಿ ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದಾರೆ. ಅವರ ನೇತೃತ್ವದಲ್ಲಿ ಆರ್ಆರ್ ತಂಡ ಫೈನಲ್ ಕೂಡ ಪ್ರವೇಶಿಸಿತ್ತು.

ಅಭಿಷೇಕ್ ಎಸ್