
ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಕೊನೆ ಹಂತದ ಲೀಗ್ ಪಂದ್ಯ ಇಂದು ಜರುಗಲಿದೆ. ಟೂರ್ನಿಯಲ್ಲಿ ಸೋಲಿಲ್ಲದ ಸರದಾರನ್ನಾಗಿ ಮುನ್ನುಗುತ್ತಿರುವ ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. ಇಂದಿನ ಪಂದ್ಯದಲ್ಲಿ ಗೆದ್ದ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಿಯಾಗಿ ಸೆಮಿಫೈನಲ್ ಹಂತಕ್ಕೆ ಎಂಟ್ರಿ ಕೊಡಲಿದೆ. ಕಿವೀಸ್ ವಿರುದ್ದ ಪಂದ್ಯದಲ್ಲಿ ಭಾರತ ಪ್ಲೇಯಿಂಗ್ 11ನಲ್ಲಿ ಕೆಲ ಬದಲಾವಣೆ ಆಗುವ ಸಾಧ್ಯತೆಯಿದೆ. ವೇಗಿ ಮೊಹಮ್ಮದ್ ಶಮಿ ಬದಲಿಗೆ ತಂಡದಲ್ಲಿ ಅರ್ಷ್ದೀಪ್ ಸಿಂಗ್ಗೆ ಅವಕಾಶ ನೀಡಬಹುದು. ಶಮಿ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಕೊಂಚ ಕಾಲಿನ ನೋವಿಗೆ ಒಳಗಾಗಿದ್ದರು. ಹೀಗಾಗಿ ಅವರಿಗೆ ಇಂದಿನ ಪಂದ್ಯದಲ್ಲಿ ವಿಶ್ರಾಂತಿ ಸಿಗುವ ನಿರೀಕ್ಷೆಯಿದೆ. ಇದರ ಜೊತೆಗೆ ನಾಯಕ ರೋಹಿತ್ ಶರ್ಮಾ ಕೂಡ ವಿಶ್ರಾಂತಿಗೆ ಹೋಗುವ ಸಾಧ್ಯತೆ ಹೆಚ್ಚಿದೆ. ಅವರು ಕೂಡ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಮಂಡಿರಜ್ಜು ಗಾಯವಾಗಿತ್ತು. ಅದಲ್ಲದೇ ಮುಂದಿನ ಹಂತ ಸೆಮಿ ಫೈನಲ್ ಆಗಿರುವುದ್ದರಿಂದ ಅದನ್ನು ಗಮನದಲ್ಲಿಟ್ಟುಕೊಂಡು ರೋಹಿತ್ ಶರ್ಮಾಗೂ ಕೂಡ ವಿಶ್ರಾಂತಿ ನೀಡಬಹದು, ಅವರ ಸ್ಥಾನದಲ್ಲಿ ರಿಷಭ್ ಪಂತ್ ಆಡುವ ಸಾಧ್ಯತೆಯಿದೆ. ರೋಹಿತ್ ಇಂದಿನ ಪಂದ್ಯ ಆಡದಿದ್ದರೆ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುವ ಅವಕಾಶ ಹೆಚ್ಚಿದೆ.

ಅಭಿಷೇಕ್. ಎಸ್