
ಐಪಿಎಲ್ 2025ರ ಆವೃತ್ತಿಗೆ ಕೇವಲ 10 ದಿನಗಳು ಮಾತ್ರ ಬಾಕಿ ಉಳಿದಿವೆ. ಎಲ್ಲ ತಂಡಗಳು ಇದಾಗಲೇ ತಮ್ಮ ಕ್ಯಾಂಪೇನ್ಗಳನ್ನು ಶುರು ಮಾಡಿವೆ. ಮಾರ್ಚ್ 22ರಿಂದ ಐಪಿಎಲ್ ಟೂರ್ನಿ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಆರ್ಸಿಬಿ ಹಾಗೂ ಕೆಕೆಆರ್ ತಂಡಗಳು ಸೆಣಸಾಡಲಿವೆ. ಅದಕ್ಕೂ ಮುನ್ನ ಮಾರ್ಚ್ 17 ರಂದು ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಅನ್ ಬಾಕ್ಸ್ ಈವೆಂಟ್ ನಡೆಯಲಿದೆ. ಅ ಈವೆಂಟ್ನಲ್ಲಿ ಎಲ್ಲ ಆಟಗಾರರು ಸಹ ಭಾಗಿಯಾಗಲಿದ್ದಾರೆ. ಆರ್ಸಿಬಿ ನಾಯಕ ರಜತ್ ಪಾಟಿದಾರ್ ಇದಾಗಲೇ ತಂಡ ಸೇರಿಕೊಂಡಿದ್ದಾರೆ. ರಜತ್ ತಂಡಕ್ಕೆ ಆಗಮಿಸಿರುವ ವಿಡಿಯೋವನ್ನು ಆರ್ಸಿಬಿ ಹಂಚಿಕೊಂಡಿದೆ. ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ತಂಡ ಮೂವರು ಆಟಗಾರನ್ನು ಉಳಿಸಿಕೊಂಡಿತ್ತು.ಅವರ ಪೈಕಿ ರಜತ್ ಪಾಟಿದರ್ ಕೂಡ ಒಬ್ಬರು. 2021ರಲ್ಲಿ ಆರ್ಸಿಬಿ ತಂಡ ಸೇರಿದ್ದ ರಜತ್ ಪಾಟಿದಾರ್ ಕಳೆದೆರಡು ವರ್ಷದಿಂದ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಅಲ್ಲದೇ ಇದೇ ಮೊದಲ ಬಾರಿಗೆ ಆರ್ಸಿಬಿ ತಂಡದ ನಾಯಕನ್ನಾಗಿ ಆಯ್ಕೆಯಾಗಿದ್ದಾರೆ. ಐಪಿಎಲ್ನಲ್ಲಿ 27 ಪಂದ್ಯಗಳನ್ನು ಆಡಿರುವ ರಜತ್ ಪಾಟಿದಾರ್ ಒಂದು ಶತಕ ಹಾಗೂ 7 ಅರ್ಧ ಶತಕ ಸಹಾಯದೊಂದಿಗೆ ಒಟ್ಟು 799 ರನ್ ಕಲೆ ಹಾಕಿದ್ದಾರೆ.

ಅಭಿಷೇಕ್ ಎಸ್