Ashwaveega News 24×7 ನವೆಂಬರ್. 06: ʼಕೆಜಿಎಫ್ ಚಾಚಾʼ ಎಂದೇ ಖ್ಯಾತರಾಗಿದ್ದ ಕನ್ನಡದ ಖಳನಟ ಹರೀಶ್ ರಾಯ್ ನಿಧನರಾಗಿದ್ದಾರೆ. ಅವರು ಬಹು ಕಾಲದಿಂದ ಬೆಂಗಳೂರಿನ ಕಿದ್ವಾಯಿ ಹಾಸ್ಪಿಟಲ್ನಲ್ಲಿ ಥೈರಾಯಡ್ ಕ್ಯಾನ್ಸರ್ ಕಾಯಿಲೆಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.
ʼಓಂʼ ಸಿನಿಮಾದಲ್ಲಿ ಖಳನಟನಾಗಿ ಮಿಂಚಿದ್ದ ಹರೀಶ್ ರಾಯ್, ಜೋಡಿ ಹಕ್ಕಿ, ಚಕ್ರವರ್ತಿ, ಕಾಶಿ, ಸಂಜು ವೆಡ್ಸ್ ಗೀತ, ನಲ್ಲ,ತಾಯವ್ವ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಥೈರಾಯ್ಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಕೆಜಿಎಫ್ ಚಿತ್ರದ ನಂತರ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಂಡಿದ್ದು, ಮೂರ್ನಾಲ್ಕು ವರ್ಷದಿಂದ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಹರೀಶ್ ರಾಯ್ ಅವರು ಥೈರಾಯ್ಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಹೊಟ್ಟೆ ಉಬ್ಬರಗೊಂಡು, ದೇಹವೆಲ್ಲ ಕೃಷಗೊಂಡು ಗುರುತೇ ಸಿಗದಂತೆ ಆಗಿದ್ದರು ಹರೀಶ್ ರಾಯ್. ತಮ್ಮ ಚಿಕಿತ್ಸೆಗಾಗಿ ಅವರು ಸಹಾಯವನ್ನು ಸಹ ಅಂಗಲಾಚಿದ್ದರು. ಅದರಂತೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ದರ್ಶನ್ ಅಭಿಮಾನಿ ಬಳಗದವರು ಸೇರಿದಂತೆ ಇನ್ನು ಹಲವಾರು ಮಂದಿ ನಟ, ನಟಿಯರು ಹರೀಶ್ ರಾಯ್ ಅವರಿಗೆ ಆರ್ಥಿಕ ಸಹಾಯ ಮಾಡಿದ್ದರು. ನಟ ಯಶ್ ಸಹ ಈ ಹಿಂದೆಯೇ ತಮಗೆ ಸಹಾಯ ಮಾಡಿರುವುದಾಗಿ ಹರೀಶ್ ರಾಯ್ ಹೇಳಿಕೊಂಡಿದ್ದರು.
ಇನ್ನು ಹಲವಾರು ಮಂದಿ ಸಿನಿಮಾ ಮಂದಿ ಹೋಗಿ ಹರೀಶ್ ರಾಯ್ ಅವರನ್ನು ಮಾತನಾಡಿಸಿ ತಾವು ಜೊತೆಗೆ ಇರುವುದಾಗಿ ಭರವಸೆ ನೀಡಿದ್ದರು. ಹಲವು ಯೂಟ್ಯೂಬರ್ಗಳು ಸಹ ಹೋಗಿದ್ದರು. ಕಳೆದ ಕೆಲ ತಿಂಗಳುಗಳಿಂದಲೂ ಸತತವಾಗಿ ಚಿಕಿತ್ಸೆಯನ್ನು ಪಡೆಯುತ್ತಲೇ ಇದ್ದರು ಹರೀಶ್ ರಾಯ್. ಇದೀಗ ಕೊನೆಗೆ ನಿಧನ ಹೊಂದಿದ್ದಾರೆ.
