Ashwaveega News 24×7 ಡಿಸೆಂಬರ್. 07: ಇತ್ತೀಚೆಗೆ ನಡೆದ ಅಂಧರ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಐತಿಹಾಸಿಕ ಜಯ ಸಾಧಿಸಿ, ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತ ತಂಡದ ಆಟಗಾರ್ತಿಯರಿಗೆ ಡಾ.ರಾಜ್ಕುಮಾರ್ ಅವರ ನಿವಾಸದಲ್ಲಿ ಅಭೂತಪೂರ್ವ ಸ್ವಾಗತ, ಸನ್ಮಾನ ಮಾಡಲಾಯಿತು.

ಡಾ.ರಾಜ್ಕುಮಾರ್ ಕುಟುಂಬದಿಂದ ವಿಶ್ವವಿಜೇತ ತಂಡವನ್ನು ನಟ ರಾಘವೇಂದ್ರ ರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ಯುವ ರಾಜ್ಕುಮಾರ್ ಅವರು ಅತ್ಯಂತ ಪ್ರೀತಿ ಹಾಗೂ ಗೌರವದಿಂದ ಬರಮಾಡಿಕೊಂಡರು.
ಸಾಧಕಿಯರಿಗೆ ಸಿಹಿ ಹಂಚಿ, ಶಾಲು ಹೊದಿಸಿ ಸನ್ಮಾನಿಸುವ ಮೂಲಕ ರಾಜ್ ಕುಟುಂಬದ ಸದಸ್ಯರು ಆಟಗಾರ್ತಿಯರ ಸಾಧನೆಯನ್ನು ಕೊಂಡಾಡಿದರು. ಕ್ರೀಡಾಪಟುಗಳೊಂದಿಗೆ ಆತ್ಮೀಯವಾಗಿ ಬೆರೆತ ರಾಘವೇಂದ್ರ ರಾಜ್ಕುಮಾರ್ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು.

ಈ ವಿಶೇಷ ಸಂದರ್ಭದಲ್ಲಿ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ್ ಕಿವಡಸಣ್ಣವರ್ ಅವರು ಉಪಸ್ಥಿತರಿದ್ದರು. ರಾಜಕುಮಾರ್ ಕುಟುಂಬದ ಆತಿಥ್ಯ ಮತ್ತು ಸರಳತೆಯನ್ನು ಕಂಡು ಅವರು ಭಾವುಕರಾದರು.
‘ಡಾ.ರಾಜ್ ಕುಟುಂಬವು ಕಲೆಗೆ ಮಾತ್ರವಲ್ಲ, ಕ್ರೀಡೆ ಮತ್ತು ಸಾಮಾಜಿಕ ಕಳಕಳಿಗೂ ಸದಾ ಮುಂಚೂಣಿಯಲ್ಲಿರುತ್ತದೆ. ವಿಶ್ವಕಪ್ ಗೆದ್ದ ನಮ್ಮ ಹೆಣ್ಣುಮಕ್ಕಳನ್ನು ತಮ್ಮ ಮನೆಗೇ ಆಹ್ವಾನಿಸಿ, ಪ್ರೀತಿಯಿಂದ ಸನ್ಮಾನಿಸಿರುವುದು ನಮ್ಮ ಸಂಸ್ಥೆಗೆ ಮತ್ತು ಅಂಧ ಕ್ರಿಕೆಟ್ ಸಮುದಾಯಕ್ಕೆ ಸಂದ ದೊಡ್ಡ ಗೌರವ’ ಎಂದು ಮಹಾಂತೇಶ್ ಸಂತಸ ವ್ಯಕ್ತಪಡಿಸಿದರು.
