Ashwaveega News 24×7 ಡಿಸೆಂಬರ್. 25: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದು ಮಗು ಸೇರಿದಂತೆ ಆರು ಮಂದಿ ಸಾವನ್ನಪ್ಪಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೀಬರ್ಡ್ ಟ್ರಾವೆಲ್ಸ್ನ ಸ್ಲೀಪರ್ ಬಸ್ಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು.
ಈ ಹಿಂದೆ ಪ್ರಾಥಮಿಕ ತನಿಖೆಗಳನ್ನು ಉಲ್ಲೇಖಿಸಿ, ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಹೇಳಿದ್ದರು. ತದನಂತರ ಐವರು ಸಾವನ್ನಪ್ಪಿರುವುದಾಗಿ ಅವರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೂ ಮಾಹಿತಿ ನೀಡಿದ್ದಾರೆ.
ಅಪಘಾತದಲ್ಲಿ ಒಂದು ಮಗು ಕೂಡಾ ಸಾವನ್ನಪ್ಪಿರುವುದು ತಿಳಿದುಬಂದಿದೆ. ಇದರೊಂದಿಗೆ ಈ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಆರು ಆಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸುದ್ದಿಗಾರರಿಗೆ ತಿಳಿಸಿದರು. ಗುರುತಿಸದ ಇನ್ನೂ ಮೂವರು ಬಸ್ ನಿಂದ ಹೊರಗೆ ಜಿಗಿದು ಪ್ರಾಣ ಕಾಪಾಡಿಕೊಂಡಿರಬಹುದು ಎಂದಿದ್ದಾರೆ.
ಅಪಘಾತದಲ್ಲಿ ಬಸ್ಸಿನಲ್ಲಿದ್ದ ಐವರು ಪ್ರಯಾಣಿಕರು ಮತ್ತು ಟ್ರಕ್ ಚಾಲಕ ಸಾವನ್ನಪ್ಪಿದ್ದಾರೆ.ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾವಿಗೆ ಸಂತಾಪ ಸೂಚಿಸಿದ್ದು, ಇಬ್ಬರೂ ಮೃತರ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದ್ದಾರೆ. ಅಪಘಾತದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕಂಟೈನರ್ ಟ್ರಕ್ ಡಿವೈಡರ್ ಗೆ ಡಿಕ್ಕಿಯಾಗಿ ಎದುರುನಿಂದ ಬರುತ್ತಿದ್ದ ಬಸ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ರವಿಕಾಂತೇ ಗೌಡ ಸುದ್ದಿಗಾರರಿಗೆ ತಿಳಿಸಿದರು. 30 ಪ್ರಯಾಣಿಕರು ಸೇರಿದಂತೆ 32 ಮಂದಿಯಿದ್ದ ಬಸ್ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿತ್ತು.
ಡಿಕ್ಕಿಯ ರಭಸಕ್ಕೆ ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಹಿರಿಯೂರು ತಾಲೂಕಿನ ಗೋಳರ್ತಿಯಲ್ಲಿ ಬಸ್ಸಿನೊಳಗೆ ಸಜೀವ ದಹನವಾಗಿದ್ದಾರೆ. ಬಸ್ ಚಾಲಕ ಮತ್ತು ಕ್ಲೀನರ್ ಅಪಘಾತದಿಂದ ಪರಾರಿಯಾಗಿದ್ದಾರೆ. ಇದುವರೆಗಿನ ತನಿಖೆಯ ಪ್ರಕಾರ, ಕಂಟೈನರ್ ಟ್ರಕ್ ಬಸ್ ನ ಡೀಸೆಲ್ ಟ್ಯಾಂಕ್ಗೆ ಡಿಕ್ಕಿ ಹೊಡೆದಿದೆ. ಇದರಿಂದ ಡೀಸೆಲ್ ಸೋರಿಕೆಯಾಗಿ ಬೆಂಕಿ ಹೊತ್ತುಕೊಂಡಿದೆ ಎಂಬುದು ತಿಳಿದುಬಂದಿದೆ ಎಂದು ಐಜಿಪಿ ತಿಳಿಸಿದರು.
