Ashwaveega News 24×7- ಜನವರಿ 06 – ನವದೆಹಲಿ: ವಿಮಾನ ಪ್ರಯಾಣದ ವೇಳೆ ಲಿಥಿಯಂ ಬ್ಯಾಟರಿಗಳು ಬೆಂಕಿ ಹತ್ತಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಪವರ್ ಬ್ಯಾಂಕ್ಗಳ ಬಳಕೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇತ್ತೀಚೆಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವೊಂದು ಟೇಕ್-ಆಫ್ ಆಗುವ ಮುನ್ನ ಪ್ರಯಾಣಿಕರ ಪವರ್ ಬ್ಯಾಂಕ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿರಲಿಲ್ಲ. ಈ ಘಟನೆಯ ಬೆನ್ನಲ್ಲೇ ಈ ಹೊಸ ‘ಡೆಂಜರಸ್ ಗುಡ್ಸ್ ಅಡ್ವೈಸರಿ ಸರ್ಕ್ಯುಲರ್’ ಜಾರಿಗೆ ಬಂದಿದೆ.
