Ashwaveega News 24×7 ಜನವರಿ 07 – Puttur :ತೋಟದಲ್ಲಿ ಹಾದು ಹೋಗಿರುವ ತ್ರಿಫೆಸ್ ವಿದ್ಯುತ್ ತಂತಿ ಕಡಿದು ಬಿದ್ದ ಪರಿಣಾಮ ಅಡಿಕೆ ತೋಟಕ್ಕೆ ಬೆಂಕಿ ಹತ್ತಿಕೊಂಡು ಸುಮಾರು 900ಕ್ಕೂ ಅಧಿಕ ಅಡಿಕೆ ಸಸಿಗಳು ಸುಟ್ಟು ಕರಕಲಾಗಿ ಲಕ್ಷಾಂತರ ರೂ.ನಷ್ಟ ಸಂಭವಿಸಿರುವ ಘಟನೆ ಕುರಿಯ ಗ್ರಾಮದ ಬೂಡಿಯಾರ್ನಲ್ಲಿ ಸಂಭವಿಸಿದೆ.
APMC ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರ ಸಹೋದರ, ಕುರಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾಗಿರುವ ಪ್ರಗತಿಪರ ಕೃಷಿಕ ಬೂಡಿಯಾರ್ ಗಣೇಶ್ ರೈಯವರ ತೋಟದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮೂರು ಎಕ್ರೆ ಪ್ರದೇಶದಲ್ಲಿದ್ದ ಅಡಿಕೆ ತೋಟದಲ್ಲಿ ಫಲವತ್ತಾಗಿ ಬೆಳೆದಿದ್ದ ಒಂದು ವರ್ಷ ಪ್ರಾಯದ 900 ಎಳೆಯ ಅಡಿಕೆ ಸಸಿಗಳು ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆ ತಿಳಿದ ಕೂಡಲೇ ಮೆಸ್ಕಾಂ ಲೈನ್ಮ್ಯಾನ್ ಆಗಮಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.

ಪುತ್ತೂರು ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಕೆ.ಎಸ್.ರವೀಂದ್ರನಾಥ ರೈ ಬಳ್ಳಮಜಲುಗುತ್ತುರವರು ಮಾತನಾಡಿ,’ಗಣೇಶ್ ರೈಯವರ 900 ಅಡಿಕೆ ಗಿಡ ವಿದ್ಯುತ್ ಅವಘಡದಿಂದ ನಾಶವಾಗಿರುವುದು ತುಂಬಾ ಬೇಸರ ತಂದಿದೆ. ಈಗ ಇರುವ ಪಂಪ್ ಲೈನ್ ವಯರ್ ಚೇಂಚ್ ಮಾಡಬೇಕು, ಹೊಸದಾಗಿ ದಪ್ಪದ ವಯರ್ ಹಾಕಬೇಕೆಂದು ಆಗ್ರಹಿಸಿದರು.
ಸರಕಾರ ಈ ಕೂಡಲೇ ಎಚ್ಚೆತ್ತು ಅಗ್ನಿ ಶಾಮಕದಳದಲ್ಲಿ ಖಾಲಿ ಇರುವ ಸಿಬ್ಬಂದಿಗಳ ಹುದ್ದೆಯನ್ನು ಕೂಡಲೇ ಭರ್ತಿಮಾಡಿ, ಒಳ್ಳೆಯ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಮೊನ್ನೆ ವಿಟ್ಲದಲ್ಲಿ ನಡೆದ ಅಗ್ನಿ ಅವಘಡ ಮಾಸುವ ಮೊದಲೇ ಕುರಿಯ ಬೂಡಿಯಾರ್ನಲ್ಲಿ ಈ ಘಟನೆ ಸಂಭವಿಸಿರುವುದು ತುಂಬಾ ದುಖದ ವಿಚಾರವಾಗಿದೆ .
ಅಗ್ನಿ ಶಾಮಕದಳದ ಅಧಿಕಾರಿ ಶಂಕರ್ರವರು ‘ಸುದ್ದಿ’ ಯೊಂದಿಗೆ ಮಾತನಾಡಿ ನಮಗೆ ಫೋನ್ ಬಂದ ತಕ್ಷಣವೇ ನಾವು ಸ್ಥಳಕ್ಕೆ ಭೇಟಿ ನೀಡಿ, ಬೆಂಕಿ ನಂದಿಸುವಲ್ಲಿ ಪ್ರಯತ್ನ ಪಟ್ಟಿದ್ದೇವೆ . ಘಟನೆಯ ಬಗ್ಗೆ ತೋಟದ ಮಾಲೀಕ ಗಣೇಶ್ ರೈ ಬೂಡಿಯಾರ್ ಅವರು ‘ಸುದ್ದಿ’ಯ ಜೊತೆ ಮಾತನಾಡಿ ‘ಜ.6ರಂದು ಬೆಳಿಗ್ಗೆ 11 ಗಂಟೆಯ ಹೊತ್ತು ನಾನು ಮತ್ತು ನನ್ನ ಪತ್ನಿ ಸುಧಾಮಣಿ ಜಿ.ರೈ ನಮ್ಮ ಇನ್ನೊಂದು ತೋಟದಲ್ಲಿ ಇದ್ದ ಸಮಯದಲ್ಲಿ ನಮ್ಮ ಪಕ್ಕದಲ್ಲಿ ಬೆಂಕಿ ಕಾಣಿಸಿಕೊಂಡಾಗ ಕೂಡಲೇ ಓಡಿ ಬಂದೆವು. ಅ ಸಮಯದಲ್ಲಿ ಬೆಂಕಿ ಶೇ.50ರಷ್ಟು ತೋಟವನ್ನು ಆವರಿಸಿ ಆಗಿತ್ತು.
