Ashwaveega News 24×7 – ಜನವರಿ 11– Bigg Boss Suraj: ಬಿಗ್ ಬಾಸ್ ಸೀಸನ್ 12 ಸುರ ಸುಂದರಾಂಗ ಸೂರಜ್ ಸಿಂಗ್, ಬಿಗ್ ಮನೆಯಿಂದ ಹೊರ ಬರ್ತಿದ್ದಂತೆಯೇ ಮತ್ತೊಂದು ಅವಕಾಶ ಬಾಗಿಲು ತೆರೆದಿದೆ. ಮನೆಯಿಂದ ಹೊರ ಬಂದ ಎರಡೇ ವಾರದಲ್ಲಿ ಅವರು ಮುಂದೇನು ಮಾಡ್ತಾರೆ ಅನ್ನೋದಕ್ಕೆ ಬಿಗ್ ಅಪ್ಡೇಟ್ಸ್ ಸಿಕ್ಕಿದ್ದು, ಮತ್ತೊಮ್ಮೆ ಕಲರ್ಸ್ ಕನ್ನಡದ ಮೂಲಕವೇ ಮಿಂಚಲಿದ್ದಾರೆ.
ಬಿಗ್ಬಾಸ್ ಸೀಸನ್ 12ರ ಮನೆಯಲ್ಲೀಗ 8 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈಗಾಗಲೇ ಹಲವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದ ಸೂರಜ್ ಸಿಂಗ್ ವಾರದ ಹಿಂದೆ ಬಿಗ್ಬಾಸ್ ಜರ್ನಿ ಮುಗಿಸಿದ್ದರು. ಇದೀಗ ಹೊಸ ಧಾರಾವಾಹಿಯಲ್ಲಿ ಹೀರೊ ಆಗಿ ನಟಿಸುತ್ತಿದ್ದಾರೆ. ಪ್ರೋಮೊ ಸಹ ಬಿಡುಗಡೆ ಆಗಿದೆ.
ಕಲರ್ಸ್ ಕನ್ನಡ ವಾಹಿನಿ ಕಾರ್ಯಕ್ರಮಗಳಲ್ಲಿ ನಟಿಸುವವರೇ ಬಿಗ್ಬಾಸ್ ಮನೆಗೆ ಸ್ಪರ್ಧಿಗಳಾಗಿ ಹೋಗೋದು, ಅದೇ ರೀತಿ ಬಿಗ್ಬಾಸ್ ಮನೆಯಲ್ಲಿ ಮಿಂಚಿದವರು ವಾಹಿನಿ ಕಾರ್ಯಕ್ರಮದಲ್ಲಿ ಬಣ್ಣ ಹಚ್ಚುವುದು ಹೊಸದೇನು ಅಲ್ಲ. ಬಣ್ಣದ ಲೋಕದ ಯಾವುದೇ ಹಿನ್ನೆಲೆ ಇಲ್ಲದ ಸೂರಜ್ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ಅವರು 68 ದಿನಗಳ ಕಾಲ ಮನೆಯಲ್ಲಿ ಇದ್ದರು. ತಮ್ಮ ವ್ಯಕ್ತಿತ್ವ ಹಾಗೂ ಆಟದಿಂದ ಗಮನ ಸೆಳೆದಿದ್ದರು. ಇನ್ನು ಸ್ವಲ್ಪ ದಿನ ಅವರು ಮನೆಯಲ್ಲಿ ಇರಬೇಕಿತ್ತು. ಫಿನಾಲೆವರೆಗೂ ಹೋಗಬೇಕಿತ್ತು ಎಂದು ಅಭಿಮಾನಿಗಳು ಭಾವಿಸಿದ್ದರು.
ಬಿಗ್ಬಾಸ್ ಮನೆಯಲ್ಲಿ ಮೊದಲ ದಿನವೇ ಸ್ವಿಮ್ಮಿಂಗ್ ಪೂಲ್ನಿಂದ ಎದ್ದು ಬಂದು ಹೆಣ್ಮಕ್ಕಳ ದಿಲ್ ಕದ್ದಿದ್ದರು. ಎಲಿಮಿನೇಟ್ ಆಗುವ ವೇಳೆಗೆ ಮತ್ತಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಬಿಟ್ಟು ಮನೆಯಲ್ಲಿ ಕೂತಿದ್ದಾಗ ಬಿಗ್ಬಾಸ್ ಮೆನೆಗೆ ಹೋಗುವ ಅವಕಾಶ ಸಿಕ್ಕಿತ್ತು. ಅದನ್ನು ಚೆನ್ನಾಗಿಯೇ ಬಳಸಿಕೊಂಡಿದ್ದರು. ಇದೇ ಜನಪ್ರಿಯತೆ ಬಳಸಿಕೊಂಡು ಮುಂದೆ ಬಣ್ಣದಲೋಕದಲ್ಲಿ ಸೂರಜ್ ಮಿಂಚುವ ಸುಳಿವು ಸಿಕ್ತಿದೆ.
ಕಲರ್ಸ್ ಕನ್ನಡ ವಾಹಿನಿಯ ‘ಪವಿತ್ರ ಬಂಧನ’ ಎಂಬ ಧಾರಾವಾಹಿಯಲ್ಲಿ ಸೂರಜ್ ಹೀರೋ ಆಗಿ ನಟಿಸುತ್ತಿದ್ದಾರೆ. ನಾಯಕಿಯಾಗಿ ಅಮೂಲ್ಯ ಭಾರಧ್ವಜ್ ನಟಿಸಿದ್ದಾರೆ. ಇದು ಸೂರಜ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೀತಿದೆ. ದೇವದತ್ ದೇಶ್ಮುಖ್ ಎಂಬ ಪಾತ್ರದಲ್ಲಿ ಸೂರಜ್ ಬಣ್ಣ ಹಚ್ಚಿದ್ದಾರೆ.
