Ashwaveega News 24×7 ಜನವರಿ 15: – ನಿಮ್ಮನ್ನು ಅತಿ ಶೀಘ್ರವೇ ದೆಹಲಿಗೆ ಕರೆಸಿಕೊಳ್ಳುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ಗೆ ಮೈಸೂರಿನಲ್ಲಿ ಹೈಕಮಾಂಡ್ ನಾಯಕ, ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ ಅಂತೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ, ಡಿಕೆ ಶಿವಕುಮಾರ್ ಸಂದೇಶ ಒಂದನ್ನು ಹಂಚಿಕೊಂಡಿದ್ದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಇದರೊಂದಿಗೆ, ಸಿಎಂ ಆಗುವ ಸುಳಿವು ಕೊಟ್ಟರಾ ಡಿಸಿಎಂ ಎಂಬ ಪ್ರಶ್ನೆಯೂ ಮೂಡಿದೆ.
ಬುಧವಾರ ಬೆಳಗ್ಗೆಯೇ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಡಿಕೆ ಶಿವಕುಮಾರ್, ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯವರನ್ನು ಸೈಡ್ಗೆ ಕರೆದುಕೊಂಡು ಹೋಗಿದ್ದ ಡಿಕೆ ಶಿವಕುಮಾರ್ ತುಸು ಹೊತ್ತು ಗಂಭೀರವಾಗಿ ಚರ್ಚಿಸುತ್ತಿರುವುದು ಕಂಡುಬಂದಿತ್ತು. ಆಗ, ನೀವು ತಲೆ ಕೆಡಿಸಿಕೊಳ್ಳಬೇಡಿ. ಶೀಘ್ರವೇ ನಿಮ್ಮನ್ನು ದೆಹಲಿಗೆ ಕರೆಯುತ್ತೇವೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದರು ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿದ್ದವು.
ಇದೀಗ, ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಡಿಕೆ ಶಿವಕುಮಾರ್ ಮಾರ್ಮಿಕ ಸಂದೇಶ ಹಂಚಿಕೊಂಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಕಾಂಗ್ರೆಸ್ಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮತ್ತೆ ತೀವ್ರಗೊಂಡಿದ್ದು, ಈ ತಿಂಗಳ ಕೊನೆಯಲ್ಲಿ ದೆಹಲಿಯಲ್ಲಿ ಮಹತ್ವದ ಸಭೆ ಆಯೋಜನೆ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ .
