Ashwaveega News 24×7 ಜನವರಿ 16 – ಮೈಸೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಹಾಗೂ ನಟ ಝೈದ್ ಖಾನ್ ನೀಡಿದ ಹೇಳಿಕೆಗಳು ಕಾಂಗ್ರೆಸ್ ಪಕ್ಷದೊಳಗೆ ಭಾರಿ ವಿವಾದಕ್ಕೆ ಕಾರಣವಾಗಿವೆ. ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಅವರ ಬೆಂಬಲಿಗರು ಝೈದ್ ಖಾನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೈಸೂರಿನಲ್ಲಿ ಕಿಡಿಕಾರಿದ ಹೇಳಿಕೆಗಳನ್ನು ನೀಡಿದ್ದಾರೆ.
ಇತ್ತೀಚೆಗೆ ಝೈದ್ ಖಾನ್ ಅವರು, “ಕಳೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಗೆ ಬಿ-ಫಾರಂ ಕೊಟ್ಟಿದ್ದರು”, “ನನಗೆ ರಾಜಕೀಯ ಆಸಕ್ತಿ ಇರಲಿಲ್ಲ”, “ನಾನು ಶಿವಾಜಿನಗರದಿಂದ ಸ್ಪರ್ಧಿಸಿದ್ದರೆ ಸುಲಭವಾಗಿ ಗೆಲ್ಲುತ್ತಿದ್ದೆ” ಎಂಬ ಹೇಳಿಕೆಗಳನ್ನು ನೀಡಿದ್ದರು ಎನ್ನಲಾಗಿದೆ. ಈ ಹೇಳಿಕೆಗಳು ರಿಜ್ವಾನ್ ಅರ್ಷದ್ ಅವರ ರಾಜಕೀಯ ಹೋರಾಟ ಮತ್ತು ಸಾಧನೆಯನ್ನು ತಗ್ಗಿಸುವ ಪ್ರಯತ್ನ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಿಜ್ವಾನ್ ಅರ್ಷದ್ ಬೆಂಬಲಿಗರು, “ನಿಮ್ಮನ್ನು ನೋಡಿ ರಿಜ್ವಾನ್ ಅರ್ಷದ್ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಅವರು ವಿದ್ಯಾರ್ಥಿ ದಶೆಯಿಂದಲೇ ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು. ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಂಘಟನೆಯನ್ನು ಕಟ್ಟಿದವರು” ಎಂದು ಸ್ಪಷ್ಟಪಡಿಸಿದರು.
ಇನ್ನೂ, “ರಿಜ್ವಾನ್ ಅರ್ಷದ್ ಅವರಿಗೆ MLA ಟಿಕೆಟ್ ನೀಡಿದ ಸಂದರ್ಭದಲ್ಲಿ ಝೈದ್ ಖಾನ್ ಕಾಂಗ್ರೆಸ್ನಲ್ಲೇ ಇರಲಿಲ್ಲ. ಸುಮ್ಮನೆ ಗೊಂದಲ ಸೃಷ್ಟಿಸುವ ಹೇಳಿಕೆಗಳನ್ನು ನೀಡಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಬೇಡಿ” ಎಂದು ಅವರು ಕಠಿಣ ಎಚ್ಚರಿಕೆ ನೀಡಿದರು.
ರಿಜ್ವಾನ್ ಅರ್ಷದ್ ಅವರು ಪಕ್ಷದ ಸಂಘಟನೆ, ಕಾರ್ಯಕರ್ತರ ಶ್ರಮ ಮತ್ತು ಜನರ ನಂಬಿಕೆಯಿಂದಲೇ ಶಾಸಕರಾಗಿದ್ದಾರೆ. ಯಾರೊಬ್ಬರ ಶಿಫಾರಸ್ಸಿನಿಂದಲ್ಲ ಎಂಬುದನ್ನು ಕಾರ್ಯಕರ್ತರು ಒತ್ತಿ ಹೇಳಿದ್ದಾರೆ. ಈ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನ ಮತ್ತೊಮ್ಮೆ ಬಹಿರಂಗವಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಹೈಕಮಾಂಡ್ ಈ ವಿಚಾರದಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ …
