Ashwaveega News 24×7 ಜನವರಿ 16 – ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸುವ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆಪ್ತ ಸಚಿವ ಕೆ.ಜೆ. ಜಾರ್ಜ್ ಅವರ ನಿವಾಸಕ್ಕೆ ದೌಡಾಯಿಸಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಅಚ್ಚರಿ ಭೇಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಕೆ.ಜೆ. ಜಾರ್ಜ್ ನಡುವೆ ಮೆಗಾ ಮಟ್ಟದ ಚರ್ಚೆ ನಡೆದಿದೆ ಅಂತೆ . ದೆಹಲಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿರುವ ಸಮಯದಲ್ಲೇ ಈ ಸಭೆ ನಡೆದಿರುವುದು ವಿಶೇಷ ಗಮನ ಸೆಳೆದಿದೆ.
ಸೋನಿಯಾ ಗಾಂಧಿ ಅವರಿಗೆ ಆಪ್ತರಾಗಿರುವ ನಾಯಕನಾಗಿ ಗುರುತಿಸಿಕೊಂಡಿರುವ ಕೆ.ಜೆ. ಜಾರ್ಜ್ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಭೆ, ಪಕ್ಷದ ಒಳರಾಜಕೀಯ ಹಾಗೂ ಮುಂದಿನ ರಾಜಕೀಯ ತಂತ್ರಗಳ ಕುರಿತಾಗಿ ನಡೆದಿರಬಹುದು ಎಂಬ ಊಹಾಪೋಹಗಳು ಜೋರಾಗಿವೆ.
ಸಿಎಂ ಹಾಗೂ ಜಾರ್ಜ್ ನಡುವಿನ ಈ ಭೇಟಿಯು ಮುಖ್ಯಮಂತ್ರಿ ಅಧಿಕಾರದ ಒಳಹೋರಾಟಕ್ಕೆ ಸಂಬಂಧಿಸಿದಂತೆ ಹೊಸ ತಿರುವು ನೀಡಬಹುದೇ ಎಂಬ ಪ್ರಶ್ನೆಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ. ಸಭೆಯ ನಿಖರ ಅಜೆಂಡಾ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗದಿದ್ದರೂ, ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಮಹತ್ವದ ಟ್ವಿಸ್ಟ್ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಡೆಲ್ಲಿ–ಬೆಂಗಳೂರು ರಾಜಕೀಯ ಚಲನವಲನಗಳ ನಡುವೆ, ಸಿಎಂ ಸಿದ್ದರಾಮಯ್ಯ–ಕೆ.ಜೆ. ಜಾರ್ಜ್ ಭೇಟಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ಸಮೀಕರಣಗಳಿಗೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
