Ashwaveega News 24×7 ಜನವರಿ 17 – ಬೆಂಗಳೂರು : ಡಾಲಿ ಧನಂಜಯ ಅವರ ‘ಡಾಲಿ ಪಿಕ್ಚರ್ಸ್’ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ ‘ಜೆಸಿ ದಿ ಯೂನಿವರ್ಸಿಟಿ’ ಸಿನಿಮಾ ಫೆಬ್ರವರಿ 6ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲು ಸಿದ್ಧವಾಗಿದೆ.
ಡಾಲಿ ಅವರ ಪ್ರೀತಿಯ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಜೋಗಿ ಪ್ರೇಮ್ ಜೆಸಿ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿ ಸಿನಿಮಾತಂಡಕ್ಕೆ ಶುಭಹಾರೈಸಿದರು. ಜೆಸಿ ಒಂದು ಪಕ್ಕ ಮಾಸ್ ಸಿನಿಮಾ. ಜೈಲಿನ ಸುತ್ತ ನಡೆಯುವ ಕಥೆ. ಹಾಗಾಗಿ ಜೋಗಿಯ ಸೂಪರ್ ಹಿಟ್ ಜೋಡಿ ಶಿವಣ್ಣ ಮತ್ತು ಪ್ರೇಮ್ ಇಬ್ಬರೂ ಸೇರಿ ಟ್ರೈಲರ್ ರಿಲೀಸ್ ಮಾಡಿದರೆ ಸೂಪರ್ ಅಂತ ನಿರ್ಧರಿಸಿ ಇಬ್ಬರ ಬಳಿ ಟ್ರೈಲರ್ ಬಿಡುಗಡೆ ಮಾಡಿಸಲಾಯಿತು.
ಚೇತನ್ ಜೈರಾಮ್ ಅವರ ಚೊಚ್ಚಲ ನಿರ್ದೇಶನದ ಈ ಸಿನಿಮಾ ಜೈಲಿನ ಒಳಗಿನ ಅವ್ಯವಹಾರ, ಕೈದಿಗಳ ದರ್ಬಾರ್ ಹಾಗೂ ಅಲ್ಲಿ ನಡೆಯುವ ಕ್ರೂರತೆಯನ್ನು ತೆರೆಮೇಲೆ ತರುತ್ತದೆ. ಫೈಟ್, ಕೊಲೆ, ರಕ್ತಪಾತದ ನಡುವೆಯೇ ಅಪ್ಪ–ಮಗನ ಭಾವನಾತ್ಮಕ ಕಥೆಯನ್ನು ಚಿತ್ರವು ಹೇಳುತ್ತದೆ. “ಮಗ ಕಿರೀಟ ಹೊತ್ತರೂ ಪರವಾಗಿಲ್ಲ, ಕಳಂಕ ಹೊತ್ತಿಕೊಳ್ಳಬಾರದು” ಎಂಬ ಡೈಲಾಗ್ ಟ್ರೈಲರ್ನಲ್ಲಿ ವಿಶೇಷ ಗಮನ ಸೆಳೆಯುತ್ತಿದೆ.

ಟ್ರೈಲರ್ ವೀಕ್ಷಿಸಿ ಮಾತನಾಡಿದ ಜೋಗಿ ಪ್ರೇಮ್, ಹೀರೋ ಸೂರ್ಯ ಪ್ರಖ್ಯಾತ್ ಅವರ ಅಭಿನಯವನ್ನು ಮನಸಾರೆ ಮೆಚ್ಚಿಕೊಂಡರು. ಜೈಲಿನ ಅನುಭವ ಯಾರಿಗೂ ಬೇಡ, ಅಲ್ಲಿ ದುಡ್ಡು ಇರುವವರಿಗೆ ಮಾತ್ರ ಬೆಲೆ ಇದೆ ಎಂದು ಜೈಲು ವ್ಯವಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಶಿವಣ್ಣನಂತೆ ಲಾಂಗ್ ಹಿಡಿಯೋದನ್ನ ಕಲಿತಿದ್ದೀಯಾ ಎಂದು ಪ್ರಖ್ಯಾತ್ ಅವರನ್ನು ಹೊಗಳಿದರು
ಶಿವರಾಜ್ ಕುಮಾರ್ ಮಾತನಾಡಿ, ಜೈಲು ಒಂದು ಪರಿವರ್ತನೆಯ ಜಾಗ. ಜೈಲಿಗೆ ಹೋಗಿ ಬಂದವರು ಬದಲಾಗುವ ಉದಾಹರಣೆಗಳು ಸಾಕಷ್ಟಿವೆ . ಸೂರ್ಯ ಪ್ರಖ್ಯಾತ್ ಅವರಲ್ಲಿ ಭವಿಷ್ಯದ ಸ್ಟಾರ್ ಆಗುವ ಎಲ್ಲಾ ಗುಣಗಳಿವೆ. ಉತ್ತಮ ಅಭಿನಯದ ಜೊತೆಗೆ ಸ್ಮಾರ್ಟ್ ಲುಕ್ ಮತ್ತು ಲಕ್ ಕೂಡ ಇದೆ ಎಂದು ಹಾರೈಸಿದರು.
ನಿರ್ಮಾಪಕ ಡಾಲಿ ಧನಂಜಯ ಮಾತನಾಡಿ, ಟ್ರೈಲರ್ ಬಿಡುಗಡೆ ಮಾಡಿಕೊಟ್ಟ ಶಿವರಾಜ್ ಕುಮಾರ್ ಮತ್ತು ಜೋಗಿ ಪ್ರೇಮ್ ಅವರಿಗೆ ಧನ್ಯವಾದ ಅರ್ಪಿಸಿದರು. “ಚಿತ್ರರಂಗದಲ್ಲಿ ಅಣ್ಣನಂತೆ ಸದಾ ಸಹಾಯಕ್ಕೆ ನಿಲ್ಲುವವರು ಶಿವಣ್ಣ. ನನ್ನ ಮೊದಲ ನಿರ್ಮಾಣದಿಂದ ಇಲ್ಲಿವರೆಗೂ ಅವರು ಬೆಂಬಲ ನೀಡುತ್ತಿದ್ದಾರೆ” ಎಂದು ಹೇಳಿದರು.

ಹೀರೋ ಸೂರ್ಯ ಪ್ರಖ್ಯಾತ್ ಮಾತನಾಡಿ, “ದುಡ್ಡು ಇದ್ದರೆ ಮಾತ್ರ ಹೀರೋ ಆಗಲು ಸಾಧ್ಯವಿಲ್ಲ. ಜನ ಒಪ್ಪಿಕೊಳ್ಳಬೇಕು, ಸರಸ್ವತಿ ಆಶೀರ್ವಾದ ಇರಬೇಕು. ದುಡ್ಡಿನಿಂದ ಎಲೆಕ್ಷನ್ ಗೆಲ್ಲಬಹುದು, ಆದರೆ ಸಿನಿಮಾ ಗೆಲ್ಲಿಸುವುದು ಕಷ್ಟ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ನಾಯಕಿ ಭಾವನಾ ರೆಡ್ಡಿ ಹೊಸಬರಿಗೆ ಅವಕಾಶ ನೀಡುತ್ತಿರುವ ಡಾಲಿ ಧನಂಜಯ ಅವರಿಗೆ ಧನ್ಯವಾದ ತಿಳಿಸಿ, ಪ್ರೇಕ್ಷಕರು ಚಿತ್ರವನ್ನು ನೋಡಬೇಕು ಎಂದು ಮನವಿ ಮಾಡಿದರು.
ಈ ಸಿನಿಮಾದಲ್ಲಿ ಖ್ಯಾತ ಸಾಹಸ ನಿರ್ದೇಶಕ ತ್ರಿಲ್ಲರ್ ಮಂಜು ಹಾಗೂ ವಿಜಯ್ ಸಿಂಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಖ್ಯಾತ ಸಂಭಾಷಣೆಕಾರ ಮಾಸ್ತಿ ಅವರ ಡೈಲಾಗ್ಗಳು, ಕಾರ್ತಿಕ್ ಅವರ ಛಾಯಾಗ್ರಹಣ ಮತ್ತು ರೋಹಿತ್ ಸೋವರ್ ಅವರ ಸಂಗೀತ ಚಿತ್ರಕ್ಕಿದೆ. ‘ಜೆಸಿ ದಿ ಯೂನಿವರ್ಸಿಟಿ’ ಸಿನಿಮಾ ಫೆಬ್ರವರಿ 6ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.
