Ashwaveega News 24×7 ಜನವರಿ 19 – ರಾಜ್ಯ ಪೊಲೀಸ್ ಇಲಾಖೆಯ ಉನ್ನತಾಧಿಕಾರಿ ಡಿಜಿಪಿ ರಾಮಚಂದ್ರ ರಾವ್ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಗಂಭೀರ ಆರೋಪಗಳು ಹರಿದಾಡುತ್ತಿವೆ. ಕಚೇರಿಯಲ್ಲೇ ಅಸಭ್ಯ ವರ್ತನೆ ನಡೆಸಿದ್ದಾರೆ ಎಂಬುದಾಗಿ ಹೇಳಲಾಗುತ್ತಿರುವ ಕೆಲ ವಿಡಿಯೋಗಳು ವೈರಲ್ ಆಗಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ವೈರಲ್ ಆಗಿರುವ ವಿಡಿಯೋಗಳಲ್ಲಿ ಡಿಜಿಪಿ ರಾಮಚಂದ್ರ ರಾವ್ ಅವರು ಹಲವು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದಾಗಿ ಆರೋಪಿಸಲಾಗಿದೆ. ಸಮವಸ್ತ್ರದಲ್ಲೇ ಮಹಿಳೆಯರೊಂದಿಗೆ ಆಪ್ತ ವರ್ತನೆ, ಮುತ್ತು ನೀಡುತ್ತಿರುವ ದೃಶ್ಯಗಳಿವೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿವೆ. ಒಬ್ಬ ಮಾಡೆಲ್ ಸೇರಿದಂತೆ ಹಲವು ಮಹಿಳೆಯರ ಹೆಸರುಗಳನ್ನು ಕೆಲವರು ಉಲ್ಲೇಖಿಸುತ್ತಿದ್ದು, ಇದರಿಂದ ವಿವಾದ ಮತ್ತಷ್ಟು ತೀವ್ರವಾಗಿದೆ.
ಆದರೆ ಈ ವಿಡಿಯೋಗಳ ನಿಜಾಸತ್ಯತೆ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ಎಲ್ಲವುಗಳು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆರೋಪಗಳಾಗಿದ್ದು, ತನಿಖೆಯ ನಂತರವೇ ಸತ್ಯಾಸತ್ಯತೆ ಬಹಿರಂಗವಾಗಬೇಕಿದೆ.
ಪೊಲೀಸ್ ಇಲಾಖೆಯಂತಹ ಶಿಸ್ತಿನ ಸಂಸ್ಥೆಯ ಉನ್ನತ ಹುದ್ದೆಯ ಅಧಿಕಾರಿಯ ವಿರುದ್ಧ ಇಂತಹ ಆರೋಪಗಳು ಕೇಳಿಬರುತ್ತಿರುವುದು ಇಲಾಖೆಯ ಗೌರವಕ್ಕೆ ಧಕ್ಕೆ ತರಬಹುದೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅಥವಾ ಹಿರಿಯ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದೆ.
