Ashwaveega News 24×7 ಜನವರಿ 20 – ರಾಸಲೀಲೆ ವಿಡಿಯೋ ವೈರಲ್ ಆಗಿ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ಇದೀಗ ಮತ್ತೊಂದು ಅಶ್ಲೀಲ ಆಡಿಯೋ ವೈರಲ್ ಆಗಿದೆ. ನಿನ್ನೆ ತಾನೇ ರಾಸಲೀಲೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಬೆನ್ನಲ್ಲೇ, ಮಹಿಳೆಯರೊಂದಿಗೆ ಅಸಭ್ಯ ಹಾಗೂ ಅಶ್ಲೀಲವಾಗಿ ಮಾತನಾಡಿರುವುದಾಗಿ ಹೇಳಲಾಗುತ್ತಿರುವ ಆಡಿಯೋ ಕ್ಲಿಪ್ ಇದೀಗ ದೊಡ್ಡ ಸದ್ದು ಮಾಡುತ್ತಿದೆ.
ವೈರಲ್ ಆಗಿರುವ ಆಡಿಯೋದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯರೊಂದಿಗೆ ಅಸಭ್ಯ ಶೈಲಿಯಲ್ಲಿ ಸಂಭಾಷಣೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಈ ಬೆಳವಣಿಗೆ ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆಯುಂಟುಮಾಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರಾಸಲೀಲೆ ವಿಡಿಯೋ ವೈರಲ್ ಆದ ನಂತರವೇ ರಾಜ್ಯ ಸರ್ಕಾರ ರಾಮಚಂದ್ರ ರಾವ್ ಅವರನ್ನು ಅಮಾನತು ಮಾಡಿದ್ದು, ಇದೀಗ ಆಡಿಯೋ ಪ್ರಕರಣವು ಅವರ ವಿರುದ್ಧದ ಆರೋಪಗಳನ್ನು ಮತ್ತಷ್ಟು ಗಂಭೀರಗೊಳಿಸಿದೆ. ಡಿಸಿಆರ್ಇ ವಿಭಾಗದ ಡಿಜಿಪಿಯಾಗಿದ್ದ ರಾಮಚಂದ್ರ ರಾವ್ ಮೇಲೆ ಈಗ ವಿಡಿಯೋ ಹಾಗೂ ಆಡಿಯೋ ಎರಡೂ ಪ್ರಕರಣಗಳ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ಸೂಚನೆ ನೀಡಲಾಗುವ ಸಾಧ್ಯತೆ ಇದೆ.
ಈ ವಿಚಾರವಾಗಿ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಉನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ವೈರಲ್ ಆದ ಆಡಿಯೋಗಳ ಸತ್ಯಾಸತ್ಯತೆ ಪರಿಶೀಲಿಸಲು ತಾಂತ್ರಿಕ ತನಿಖೆ ನಡೆಸಲಾಗಲಿದೆ . ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ರಾಜ್ಯದಲ್ಲಿ ಕಾನೂನು ಮತ್ತು ಶಿಸ್ತು ಕಾಪಾಡಬೇಕಾದ ಹಿರಿಯ ಅಧಿಕಾರಿಯ ಮೇಲಿನ ಈ ಆರೋಪಗಳು, ಆಡಳಿತ ವ್ಯವಸ್ಥೆಯಲ್ಲಿಯೇ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿವೆ.
