
(ಅಶ್ವವೇಗ) Ashwaveega News 24×7 ಜು.06: “ಎಐಸಿಸಿ ಒಬಿಸಿ ಕಮಿಟಿಗೆ ಸಿಎಂ ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಿರುವುದು ಡಿಪ್ರಮೋಷನ್ನೋ ಅಥವಾ ಪ್ರಮೋಷನ್ನೋ ಅಂತ ಅವರೇ ಹೇಳಬೇಕು” ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಐಸಿಸಿ ಒಬಿಸಿ ಕಮಿಟಿಗೆ ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರಾಗಿ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿ, ” ಅಧಿಕಾರ ಇಲ್ಲದ ಸಮಿತಿಗೆ ಸಿದ್ದರಾಮಯ್ಯ ಅವರನ್ನು ನೇಮಕ ಮಾಡಿದ್ದಾರೆ. ಇದು ಕರ್ನಾಟಕದ ಮಟ್ಟಿಗೆ ಬಹಳ ಮಹತ್ವದ ಬೆಳವಣಿಗೆ. ಸಿದ್ದರಾಮಯ್ಯ ಇದನ್ನು ಯಾವ ರೀತಿ ತಗೊಳ್ತಾರೋ ಗೊತ್ತಿಲ್ಲ. ಒಬಿಸಿ ಕಮಿಟಿಗೆ ಸಿದ್ದರಾಮಯ್ಯ ನೇಮಕ ಬಗ್ಗೆ ಸ್ಪಷ್ಟ ಆದೇಶವನ್ನೂ ಮಾಡಿಲ್ಲ” ಎಂದು ಹೇಳಿದ್ದಾರೆ.
“ಕರ್ನಾಟಕದಲ್ಲಿ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ ಇನ್ನಷ್ಟು ಪುಷ್ಟಿ ಇದರಿಂದ ಸಿಕ್ಕಿದೆ. ಏನೇ ಆಗಲಿ ಅದು ಕಾಂಗ್ರೆಸ್ನ ಆಂತರಿಕ ನಿರ್ಣಯ. ಆದರೆ, ರಾಜ್ಯ ರಾಜಕಾರಣದಲ್ಲಿ ಸಿಎಂಗಳಿರುವಾಗ ಯಾವಾಗ ಬದಲಾವಣೆ ಆಗಿದೆಯೋ ಅವರಿಗೆ ರಾಷ್ಟ್ರಮಟ್ಟದಲ್ಲಿ ಅವರಿಗೆ ಸ್ಥಾನ ಕೊಡೋದು ನಡೆದುಕೊಂಡು ಬಂದಿದೆ” ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯಕ್ಕೆ ಬರ್ತಾರೆ ಎಂಬ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿ, “ಇದು ಚರ್ಚೆ ಆಗುತ್ತಿರಬಹುದು. ಆದರೆ ಇಲ್ಲಿ ಕೇಂದ್ರಬಿಂದು ಸಿದ್ದರಾಮಯ್ಯ” ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವೃತ್ತಿ ಸಮಯ ಹತ್ತಿರ ಬಂದಿದೆ ಎನ್ನುವುದಕ್ಕೆ ಹೈಕಮಾಂಡ್ ರಚನೆ ಮಾಡಿರುವ ಎಐಸಿಸಿ ಒಬಿಸಿ ರಾಷ್ಟ್ರೀಯ ಸಲಹಾ ಮಂಡಳಿ ಎಂಬ ಪುನರ್ವಸತಿ ಕೇಂದ್ರವೇ ಸಾಕ್ಷಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ”ಸಿದ್ದರಾಮಯ್ಯನವರೇ, ನಿಮ್ಮ ಸೇವೆ ಸಾಕು, ರಾಜೀನಾಮೆ ಕೊಟ್ಟು ನಿವೃತ್ತರಾಗಿ ಎಂದು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಪರೋಕ್ಷವಾಗಿ ಹೇಳುತ್ತಿದ್ದಾರೆ. ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು. ಈ ರಬ್ಬರ್ ಸ್ಟ್ಯಾಂಪ್ ಕುರ್ಚಿ ಇದ್ದರೆಷ್ಟು, ಬಿಟ್ಟರೆಷ್ಟು. ನಿಮಗೆ ಕಿಂಚಿತ್ತಾದರೂ ಸ್ವಾಭಿಮಾನ ಇದ್ದಿದ್ದರೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯುತ್ತಿರಲಿಲ್ಲ” ಎಂದು ಕುಟುಕಿದ್ದಾರೆ.
ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಈ ಬಗ್ಗೆ ಮಾತನಾಡಿ, ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಅವರಿಗೆ ಒಂದು ಶೆಡ್ ರೆಡಿ ಮಾಡ್ತಿದ್ದಾರೆ. ಒಬಿಸಿ ಒಗ್ಗೂಡಿಸಲು ರಾಷ್ಟ್ರಮಟ್ಟಕ್ಕೆ ಕರೆದುಕೊಂಡು ಹೋಗುತ್ತಿದ್ದೇವೆ ಅಂತಿದ್ದಾರೆ. ಒಂದು ಕಾಲು ಇಲ್ಲಿಂದ ಎತ್ತಿಟ್ರು ಅಂದ್ರೆ ಶೆಡ್ಗೆ ಹೋದ ಹಾಗೆನೇ. ಅಲ್ಲಿಗೆ ನವೆಂಬರ್ಗೆ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿತಿದ್ದಾರೆ ಅಂತರ್ಥ. ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಶೆಡ್ ಕಟ್ಟಿ ಕರೆದುಕೊಂಡು ಹೋಗಿದ್ರು” ಎಂದು ಲೇವಡಿ ಮಾಡಿದ್ರು.