
CM siddaramaiah
(ಅಶ್ವವೇಗ) Ashwaveega News 24×7 ಜು.06: “ಎಐಸಿಸಿ ಒಬಿಸಿ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಜವಾಬ್ದಾರಿ ಕೊಟ್ಟಾಗ ಬಿಟ್ಟು ಓಡಿ ಹೋಗುವುದಾ?” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಭಾನುವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಐಸಿಸಿ ಒಬಿಸಿ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, “ನನಗೆ ಅದರ ಬಗ್ಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ನೋಡಿದ್ದೇನೆ. ಅದರ ಬಗ್ಗೆ ಹೈಕಮಾಂಡ್ ಬಳಿ ಮಾತನಾಡುತ್ತೇನೆ. ಬಿ.ಕೆ. ಹರಿಪ್ರಸಾದ್ ಪತ್ರ ಬರೆದು, ಕೇಂದ್ರ ಒಬಿಸಿ ಅಧ್ಯಕ್ಷರು ರಾಜ್ಯದಲ್ಲಿ ಸಭೆ ಮಾಡಲು ಹೇಳಿದ್ದರು. ಆ ಸಭೆಯನ್ನು ನಾನು ಜು.15ಕ್ಕೆ ಮಾಡಲು ವ್ಯವಸ್ಥೆ ಮಾಡಿದ್ದೇನೆ. ಈಗ ಅಧ್ಯಕ್ಷರಾಗಿ ನೇಮಕ ಮಾಡಿರುವ ಬಗ್ಗೆ ನನಗೆ ಗೊತ್ತಿಲ್ಲ” ಎಂದು ಸ್ಪಷ್ಟಪಡಿಸಿದರು.
ಜವಾಬ್ದಾರಿಯನ್ನು ಸ್ವೀಕರಿಸುತ್ತೀರಾ ಎಂಬ ಪ್ರಶ್ನೆಗೆ, “ಜವಾಬ್ದಾರಿ ಕೊಟ್ಟಾಗ ಬಿಟ್ಟು ಓಡಿ ಹೋಗುವುದಾ? ನಾನೇನು ಅದನ್ನು ಕೇಳಿಲ್ಲ. ಅವರು ಘೋಷಣೆ ಮಾಡಿದ್ದಾರೆ. ಹೈ ಕಮಾಂಡ್ ಬಳಿ ಮಾತನಾಡುತ್ತೇನೆ. ಇದು ರಾಷ್ಟ್ರ ರಾಜಕಾರಣ ಅಲ್ಲ. ಯಾವ ಹುದ್ದೆ ಕೊಟ್ಟಿದ್ದಾರೆ ಎಂಬುದು ನನಗೆ ಗೊತ್ತಿಲ್ಲ” ಎಂದು ಇದೇ ವೇಳೆ ತಿಳಿಸಿದರು.
ರಸ್ತೆ ಅಭಿವೃದ್ಧಿ ಆಗಬೇಕಾದರೆ ಗ್ಯಾರಂಟಿ ತಗೊಳೋದು ಬಿಡಿ ಎಂಬ ರಾಯರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿ, “ಗ್ಯಾರಂಟಿ ಯೋಜನೆಯನ್ನು ಬದಲಾವಣೆ ಮಾಡುವ ಪ್ರಶ್ನೆ ಇಲ್ಲ. ಅದು ಬಡವರ ಕಾರ್ಯಕ್ರಮವಾಗಿದೆ. ಎಲ್ಲಾ ಜಾತಿಯ ಬಡವರಿಗೆ ಮಾಡಿರುವಂಥ ಕಾರ್ಯಕ್ರಮವಾಗಿದೆ. ಆರ್ಥಿಕ, ಸಾಮಾಜಿಕ ಶಕ್ತಿ ತುಂಬುವ ಕಾರ್ಯಕ್ರಮವಾಗಿದೆ. ಅದನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಈ ಬಾರಿ ಪ್ರತಿ ಶಾಸಕರಿಗೆ ರಸ್ತೆ, ಸೇತುವೆ ಕಾಮಗಾರಿಗಳಿಗಾಗಿ ಸ್ವಲ್ಪ ಹಣ ಕೊಡುತ್ತಿದ್ದೇವೆ. ಬಿಜೆಪಿ, ಜೆಡಿಎಸ್ ಶಾಸಕರಿಗೂ ಕೊಡುತ್ತೇವೆ” ಎಂದು ಸಿಎಂ ಹೇಳಿದರು.