
BMTC bus crashes into roadside stall in Bengaluru
Ashwaveega News 24×7 ಜು.18: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ ರಸ್ತೆಬದಿಯ ಹೊಟೆಲ್ ಗೆ ಡಿಕ್ಕಿ ಹೊಡೆದ ಪರಿಣಾಮ, ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇತರ ಐದು ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ನಡೆದಿದೆ. ಅಪಘಾತಕ್ಕೆ ಕಾರಣವೇನೆಂದು ಪೊಲೀಸರು ಇನ್ನೂ ಖಚಿತಪಡಿಸಿಲ್ಲ.
ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಬಸ್ ಅಪಘಾತಗಳು ಹೆಚ್ಚುಚ್ಚಿವೆ. ಜುಲೈ 2 ರಂದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಬಳಿಯ ಜಿಗಣಿಯಲ್ಲಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಶಾಲಾ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದ.
ಮುಖ್ಯ ರಸ್ತೆಯಿಂದ ಮಕ್ಕಳನ್ನು ಕರೆದುಕೊಂಡು ಹೋಗಲು ಶಾಲಾ ಬಸ್ ನಿಂತಿದ್ದಾಗ ಈ ಘಟನೆ ಸಂಭವಿಸಿತ್ತು. ಇಂತಹ ದುರಂತ ಘಟನೆಗಳು ಮರುಕಳಿಸದಂತೆ ಬಿಎಂಟಿಸಿ ಮತ್ತು ಸಂಚಾರ ಇಲಾಖೆಯವರು ಎಚ್ಚರಿಕೆ ವಹಿಸಬೇಕಾಗಿದೆ.
ಘಟಕ 22ರ KA.51.AK.4170 ನಂಬರ್ನ ಬಿಎಂಟಿಸಿ ಬಸ್ ಪೀಣ್ಯ 2ನೇ ಹಂತದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಡ್ರೈವರ್ ಬದಲು ಕಂಡೆಕ್ಟರ್ ಬಸ್ ಚಲಾಯಿಸಲು ಹೋಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಡ್ರೈವರ್ ಬದಲಾಗಿ ಕಂಡೆಕ್ಟರ್ ರಮೇಶ್ ಬಸ್ ಚಾಲನೆ ಮಾಡ್ತಿದ್ದರು. ಈ ವೇಳೆ ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ ಪರಿಣಾಮ ಬಸ್ ಫುಟ್ಪಾತ್ಗೆ ನುಗ್ಗಿದೆ. ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಯುವತಿ ಬಸ್ ನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಫುಟ್ ಪಾತ್ ನಲ್ಲಿದ್ದ ಬೀದಿ ಬದಿ ಹೋಟೆಲ್ ನಲ್ಲಿದ್ದ ಇಬ್ಬರು ಸೇರಿದಂತೆ ಐದು ಮಂದಿಗೆ ಗಾಯವಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಮೃತ ಯುವತಿಯನ್ನು 25 ವರ್ಷದ ಸುಮಾ ಎಂದು ಗುರುತಿಸಲಾಗಿದೆ.