
Dilip Doshi, Former India Left-Arm Spinner, Dies Aged 77
ಭಾರತದ ಮಾಜಿ ಎಡಗೈ ಸ್ಪಿನ್ನರ್ ದಿಲೀಪ್ ದೋಶಿ ಲಂಡನ್ನಲ್ಲಿ ಸೋಮವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಈ ವಿಷಯವನ್ನು ಖಚಿತಪಡಿಸಿದೆ.
ದಿಲೀಪ್ ದೋಶಿ ಅವರು ಬಿಷನ್ ಸಿಂಗ್ ಬೇಡಿ ಅವರ ನಿವೃತ್ತಿಯ ನಂತರ 1979 ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಅವರು 1983 ರವರೆಗೆ 33 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು 114 ವಿಕೆಟ್ಗಳನ್ನು ಪಡೆದಿದ್ದಾರೆ. ಇದರಲ್ಲಿ ಆರು ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅವರು ತಮ್ಮ ಆರಂಭಿಕ ವರ್ಷಗಳಲ್ಲಿ ತವರಿನಲ್ಲಿ ಅದ್ಭುತ ಪ್ರದರ್ಶನ ನೀಡಿದರು.
ಕೇವಲ 28 ಟೆಸ್ಟ್ ಪಂದ್ಯಗಳಲ್ಲಿ 100 ವಿಕೆಟ್ಗಳನ್ನು ಪಡೆದರು. 1981 ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಪಂದ್ಯದಲ್ಲಿ ಅವರು ಗಾಯಗೊಂಡ ಕಾಲಿನಿಂದಲೇ ಬೌಲಿಂಗ್ ಮಾಡಿದರು. ಆ ಪಂದ್ಯದಲ್ಲಿ ಐದು ವಿಕೆಟ್ ಪಡೆದು ಭಾರತಕ್ಕೆ ಗೆಲುವು ತಂದುಕೊಟ್ಟರು.
ದೋಷಿ ಅವರು ಇಂಗ್ಲಿಷ್ ಕೌಂಟಿ ಕ್ರಿಕೆಟ್ನಲ್ಲಿ ನಾಟಿಂಗ್ಹ್ಯಾಮ್ಶೈರ್ ಮತ್ತು ವಾರ್ವಿಕ್ಶೈರ್ ತಂಡಗಳಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ಆಡಿದ್ದಾರೆ. ಭಾರತದ ದೇಶೀಯ ಕ್ರಿಕೆಟ್ನಲ್ಲಿ ಬಂಗಾಳ ಮತ್ತು ಸೌರಾಷ್ಟ್ರ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 43 ಬಾರಿ ಐದು ವಿಕೆಟ್ ಪಡೆದು 898 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಮಾಜಿ ಬಿಸಿಸಿಐ ಕಾರ್ಯದರ್ಶಿ ನಿರಂಜನ್ ಶಾ ಅವರು ದೋಶಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಅವರು ನನ್ನ ಕುಟುಂಬದ ಸದಸ್ಯರಂತೆ ಇದ್ದರು. ಅವರು ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು,” ಎಂದು ಶಾ ಹೇಳಿದ್ದಾರೆ.
ದಿಲೀಪ್ ದೋಶಿ ಅವರು ನಿಖರವಾದ ಬೌಲಿಂಗ್ ಮತ್ತು ಚಾಣಾಕ್ಷತನದಿಂದ ಎದುರಾಳಿ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕುತ್ತಿದ್ದರು. ಅವರು ಟೀಮ್ ಇಂಡಿಯಾದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದರು.