Ashwaveega News 24×7 ಅಕ್ಟೋಬರ್. 25: ಬಿಗ್ಬಾಸ್ ರಿಯಾಲಿಟಿ ಶೋ 8ನೇ ಆವೃತ್ತಿಯ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್ ಎಂಬುವರ ಕಾರು ಬೈಕ್ಗೆ ಡಿಕ್ಕಿ ಹೊಡೆದು ಹಿಟ್ ಅಂಡ್ ರನ್ ಮಾಡಿದ ಆರೋಪದಡಿ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಅ.4ರ ತಡರಾತ್ರಿ 1.30ರ ಸುಮಾರಿಗೆ ಬ್ಯಾಟರಾಟಪುರ ಜಯಮ್ಮ ಟಿ. ಸ್ಟಾಲ್ ಬಳಿ ಬೈಕ್ಗೆ ಡಿಕ್ಕಿ ಹೊಡೆದ ಕಾರಿನಲ್ಲಿದ್ದ ದಿವ್ಯಾ ಪರಾರಿಯಾಗಿದ್ದರು. ಘಟನೆಯಲ್ಲಿ ಅನಿತಾ ಎಂಬುವರ ಮೊಣಕಾಲಿಗೆ ಪೆಟ್ಟಾಗಿತ್ತು. ಈ ಸಂಬಂಧ ಬೈಕ್ ಸವಾರ ಕಿರಣ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಿವ್ಯಾ ಸುರೇಶ್ ಅವರನ್ನು ವಿಚಾರಣೆ ನಡೆಸಿದ್ದಾರೆ.
ಒನ್ ವೇನಲ್ಲಿ ಬರುವುದಲ್ಲದೇ ಬೈಕ್ನಲ್ಲಿ ತ್ರಿಬಲ್ ರೈಡಿಂಗ್ ಮಾಡಿದ್ದಾರೆ ಎಂದು ದಿವ್ಯಾ ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ದೀಪಾಂಜಲಿ ನಗರ ನಿವಾಸಿ ಕ್ಯಾಬ್ ಚಾಲಕ ಕಿರಣ್, ಸಂಬಂಧಿಯಾಗಿರುವ ಅನುಷಾ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಗಿರಿನಗರದ ಕಡೆಗೆ ಆಸ್ಪತ್ರೆಯೊಂದಕ್ಕೆ ಹೋಗಲು ಒಂದೇ ಬೈಕಿನಲ್ಲಿ ಮೂವರು ತೆರಳುತ್ತಿದ್ದರು. ಜಯಮ್ಮ ಟಿ. ಸ್ಟಾಲ್ ಬಳಿಯ ಅಡ್ಡರಸ್ತೆಯೊಂದರ ಮೂಲಕ ವೇಗವಾಗಿ ಬಂದ ಕಾರು ನೇರವಾಗಿ ಬೈಕ್ ಡಿಕ್ಕಿ ಹೊಡೆದಿದೆ.
