Ashwaveega News 24×7 ಅಕ್ಟೋಬರ್. 25: ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರೋ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಖ್ಯಾತ ಗಾಯಕಿ ವಾರಿಜ ಶ್ರೀ ಮತ್ತು ರಘು ದೀಕ್ಷಿತ್ ಜೊತೆಗಿನ ಮದುವೆ ಫೋಟೋಗಳು ಇದೀಗ ವೈರಲ್ ಆಗುತ್ತಿವೆ.
ರೋಮ್ಯಾಂಟಿಕ್ ಹಾಡುಗಳಿಂದಲೇ ಗಮನ ಸೆಳೆದಿರೋ ರಘು ದೀಕ್ಷಿತ್ 50ನೇ ವಯಸ್ಸಿನಲ್ಲೇ ಹೊಸ ಜೀವನ ಆರಂಭಿಸಿದ್ದಾರೆ. ಗ್ರ್ಯಾಮಿ ನಾಮನಿರ್ದೇಶಿತ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಅವರ ಜೊತೆ ಇಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಇವರಿಬ್ಬರ ಮದುವೆ ಶಾಸ್ತ್ರೋಕ್ತವಾಗಿ ನೆರವೇರಿದೆ.
ಗಾಯಕ ರಘು ದೀಕ್ಷಿತ್ ಮತ್ತು ವಾರಿಜಶ್ರೀ ವೇಣುಗೋಪಾಲ್ ಅವರು ಈ ತಿಂಗಳಾಂತ್ಯಕ್ಕೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಸುದ್ದಿಯಾಗಿತ್ತು. ವಾರಿಜಶ್ರೀ ವೇಣುಗೋಪಾಲ್ ಅವರು ಗ್ರ್ಯಾಮಿ ನಾಮನಿರ್ದೇಶಿತ ಗಾಯಕಿ ಮತ್ತು ಕೊಳಲು ವಾದಕಿಯಾಗಿದ್ದು, ಸಂಗೀತ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದಾರೆ.
ಇನ್ನು ರಘು ದೀಕ್ಷಿತ್ ಮತ್ತು ವಾರಿಜಶ್ರೀ ಮದುವೆಗೆ ಕೆಲ ಚಿತ್ರರಂಗದ ಸ್ನೇಹಿತರು ಭಾಗವಹಿಸಿದ್ದಾರೆ. ಇವರ ಮದುವೆಗೆ ನಟಿ ಯುಮುನಾ ಹಾಗು ಶ್ರದ್ಧಾ ಸೇರಿದಂತೆ ಸಾಕಷ್ಟು ಸ್ನೇಹಿತರು ಸಾಕ್ಷಿಯಾಗಿದ್ದಾರೆ.
ಗಾಯಕ ರಘು ದೀಕ್ಷಿತ್ಗೆ 50 ವರ್ಷವಾಗಿದ್ದು, ಇವರಿಗೆ ಇದು ಎರಡನೇ ಮದುವೆ. ಈ ಹಿಂದೆ ಡ್ಯಾನ್ಸ್ ಕೋರಿಯೋಗ್ರಾಫರ್ ಮಯೂರಿ ಉಪಾಧ್ಯ ಜೊತೆ ವಿವಾಹವಾಗಿದ್ದರು. 2019ರಲ್ಲಿ ಅವರಿಬ್ಬರು ವಿಚ್ಛೇದನ ಪಡೆದಿದ್ದರು. ಬಳಿಕ ಇನ್ನೊಂದು ಮದುವೆ ಬಗ್ಗೆ ರಘು ದೀಕ್ಷಿತ್ ಅವರು ಆಲೋಚನೆ ಮಾಡಿರಲಿಲ್ಲ. ಆದರೆ ವಾರಿಜಶ್ರೀ ಜೊತೆ ಒಡನಾಟ ಹಾಗೂ ಸ್ನೇಹ ಹೆಚ್ಚಾದ ಹಿನ್ನೆಲೆ ವಾರಿಜಶ್ರೀ ಜೊತೆ ಮದುವೆ ಆಗಿದ್ದಾರೆ. ವಾರಿಜಶ್ರೀಗೆ 34 ವರ್ಷ ವಯಸ್ಸಾಗಿದ್ದು, ರಘು ದೀಕ್ಷಿತ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
