
Iran Warns Strike On US Fleet, Closure Of Strait Of Hormuz
ಇರಾನ್ನ ಮೂರು ಪರಮಾಣು ಕೇಂದ್ರಗಳ (Nuclear Facility) ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಮೆರಿಕಾಗೆ ಕಟು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕನ್ನರು ಹಿಂದೆಂದಿಗಿಂತಲೂ ಭೀಕರ ಹಾಗೂ ಹೆಚ್ಚಿನ ಹಾನಿ ಉಂಟುಮಾಡಬಲ್ಲ ದಾಳಿಯನ್ನು ಎದುರಿಸಲು ಸಜ್ಜಾಗಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ದನಿಗೂಡಿಸಿರುವ ಖಮೇನಿಯ ಪ್ರತಿನಿಧಿ ಹೊಸೈನ್ ಶರಿಯತ್ಮದಾರಿ, ಒಂದೂ ಕ್ಷಣವೂ ತಡಮಾಡದೇ ಪ್ರತೀಕಾರದ ದಾಳಿ ನಡೆಸಲು ಸೂಚನೆ ನೀಡುವಂತೆ ಒತ್ತಾಯಿಸಿದ್ದಾರೆ.
ಈಗ ಯಾವುದೇ ವಿಳಂಬವಿಲ್ಲದೇ ಕಾರ್ಯನಿರ್ವಹಿಸುವ ಸರದಿ ನಮ್ಮದಾಗಿದೆ. ಮೊದಲ ಹೆಜ್ಜೆಯಾಗಿ ನಾವು ಬಹ್ರೇನ್ನಲ್ಲಿರುವ ಯುಎಸ್ ನೌಕಾಪಡೆಯ ಮೇಲೆ ಕ್ಷಿಪಣಿ ದಾಳಿ ಮಾಡಬೇಕು. ಅದೇ ಸಮಯಕ್ಕೆ ಅಮೆರಿಕನ್, ಬ್ರಿಟಿಷ್, ಜರ್ಮನ್ ಮತ್ತು ಫ್ರೆಂಚ್ ಹಡಗುಗಳಿಗೆ ಹಾರ್ಮುಜ್ ಜಲಸಂಧಿ ಮುಚ್ಚಬೇಕು. ನಿರ್ಣಾಯಕ ಮಿಲಿಟರಿ ಕ್ರಮ ಕೈಗೊಳ್ಳಬೇಕು ಎಂದು ಖಮೇನಿ ಅವರಿಗೆ ಪ್ರತಿನಿಧಿ ಸಲಹೆ ನೀಡಿದ್ದಾರೆ.
ಅಮೆರಿಕದ ದಾಳಿಯನ್ನು ಖಚಿತಪಡಿಸಿರುವ ಇರಾನ್ನ ಪರಮಾಣು ಇಂಧನ ಸಂಸ್ಥೆ, ಇದು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯ ಕ್ರೂರ ಕೃತ್ಯ ಎಂದು ಹೇಳಿದೆ. ನಮ್ಮ ಫೋರ್ಡೊ, ನಟಾಂಜ್ ಮತ್ತು ಎಸ್ಫಹಾನ್ ಪರಮಾಣು ಕೇಂದ್ರಗಳ ಮೇಲೆ ಶತ್ರುದೇಶ ದಾಳಿ ನಡೆಸಿದ್ದು, ಇದು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗಿದೆ ಎಂದು ಹೇಳಿಕೊಂಡಿದೆ. ಅಲ್ಲದೇ ಈ ದಾಳಿಯನ್ನು ಬಲವಾಗಿ ಖಂಡಿಸುವಂತೆ ಇರಾನ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದೆ. ಜೊತೆಗೆ ತನ್ನ ಪರಮಾಣು ಅಭಿವೃದ್ಧಿ ಕಾರ್ಯಕ್ರಮ ನಿಲ್ಲಿಸಲು ಸಾಧ್ಯವಿಲ್ಲವೆಂದೂ ಹೇಳಿದೆ.
ಇನ್ನು ಇತ್ತ ಅಮೆರಿಕ ಭೀಕರ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ ಶಾಂತಿ ಮಾತುಕತೆಗೆ ವಿಶ್ವಸಂಸ್ಥೆ ಮನವಿ ಮಾಡಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಇರಾನ್ ಮೇಲೆ ಅಮೆರಿಕ ತೆಗೆದುಕೊಂಡ ಮಿಲಿಟರಿ ಕ್ರಮದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.