
home minister parameshwara reaction to viral audio
“ದುಡ್ಡಿಲ್ಲ ಅಂತ ಯಾರು ಹೇಳಿದ್ದು?. ನಾನು ತಮಾಷೆಗೆ ಹೇಳಿದ್ದೇನೆ ಅಷ್ಟೇ” ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರ ವೈರಲ್ ಹೇಳಿಗೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾತನಾಡಿದ ಅವರು, ಸರ್ಕಾರದ ಬಳಿ ಹಣವಿಲ್ಲ ಎಂಬ ತಮ್ಮ ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿ, “ಸಿಎಂ 4.9 ಲಕ್ಷ ಕೋಟಿ ಬಜೆಟ್ ಮಾಡಿದ್ದಾರೆ? ನಾನು ಸರ್ಕಾರದ ಬಳಿ ದುಡ್ಡಿಲ್ಲ ಅಂತ ಹೇಳಿಲ್ಲ. ಯಾವುದೇ ರೀತಿಯ ಆರ್ಥಿಕ ಮುಗ್ಗಟ್ಟು ಇಲ್ಲ. ಹಣ ಬಿಡುಗಡೆ ಸ್ವಲ್ಪ ನಿಧಾನ ಆಗಿರಬಹುದು. ಡಿಪಿಆರ್ ಮಾಡೋದ್ರಲ್ಲಿ ತಡ ಆಗಿರಬಹುದು” ಎಂದು ತಿಳಿಸಿದರು.
ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಪ್ರಕರಣ ಸಂಬಂಧ ಮಾತನಾಡಿ, “ನನಗೆ ಬಂದಿರುವ ಮಾಹಿತಿ ಪ್ರಕಾರ ಅನಂತ್ ಕುಮಾರ್ ಹೆಗ್ಡೆ ಹೈವೈನಲ್ಲಿ ಬರಬೇಕಾದರೆ ಘಟನೆ ನಡೆದಿದೆ. ಡ್ರೈವರ್, ಗನ್ ಮ್ಯಾನ್ ಕಾರು ನಿಲ್ಲಿಸಿ ಹೊಡೆದಿದ್ದಾರೆ ಎಂದು ಹೇಳಲಾಗಿದೆ. ಆದರೆ ಗನ್ ಮ್ಯಾನ್ ಹೊಡೆದಿಲ್ಲ ಅಂತಿದ್ದಾರೆ. ಇದರ ಬಗ್ಗೆ ಈಗಲೇ ಹೇಳೋಕೆ ಆಗಲ್ಲ. ಇದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕಿದೆ. ಇನ್ನಷ್ಟು ದಿನ ಕಾದು ನೋಡೋಣ. ತನಿಖೆಯಲ್ಲಿ ಏನು ಬರುತ್ತೆ ಅಂತ ನೋಡೋಣ” ಎಂದರು.
ಗಾಂಜಾ ಗಿರಾಕಿಗಳಿಂದ ಯುವತಿ ಮೇಲೆ ಹಲ್ಲೆ ವಿಚಾರವಾಗಿ ಮಾತನಾಡಿ, “ಇಂತಹ ಘಟನೆಗಳನ್ನು ಲಘುವಾಗಿ ಪರಿಗಣಿಸಲ್ಲ. ಕೂಡಲೇ ಕೇಸ್ ಹಾಕಿ ಅರೆಸ್ಟ್ ಮಾಡುತ್ತೇವೆ. ಕೂಡಲೇ ಕ್ರಮ ತೆಗೆದುಕೊಳ್ಳುವ ಕೆಲಸ ಆಗಿದೆ. ಇವು ಸಮಾಜದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಕಾಲ್ತುಳಿತ ಪ್ರಕರಣದ ವರದಿ ಕೇಂದ್ರಕ್ಕೆ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ಪೊಲೀಸ್ ವೈಫಲ್ಯ ಅಂತ ವರದಿಯಲ್ಲಿ ಉಲ್ಲೇಖವಾಗಿದೆ. ನಾನು ಆ ವರದಿಯನ್ನು ನೋಡಿಲ್ಲ. ಯಾವ ಅರ್ಥದಲ್ಲಿ ಆ ರೀತಿ ಹೇಳಿದ್ದಾರೆ ಗೊತ್ತಿಲ್ಲ. ಏನಿದೆ ನೋಡಬೇಕು. ಮಾಧ್ಯಮಗಳಲ್ಲೇ ನೋಡಿ ಗೊತ್ತಾಯ್ತು” ಎಂದು ತಿಳಿಸಿದರು.
ಕೈ ಶಾಸಕರ ಅಸಮಾಧಾನ ವಿಚಾರವಾಗಿ ಮಾತನಾಡಿ, “ಕ್ಷೇತ್ರಗಳಿಗೆ ಅನುದಾನ ಬಂದಿಲ್ಲ ಅಂತ ಇದೆ. ಕೆಲ ಶಾಸಕರು ಹೇಳಿರೋದನ್ನು ನಾನು ಗಮನಿಸಿದ್ದೇನೆ. ಯಾರಿಗೆ ಆಗಲಿ ಅನುದಾನ ಇಲ್ಲ ಅಂದ್ರೆ ಕಷ್ಟ. ಬೇಜಾರು ಆಗೋದು ಸಹಜ, ಅದಕ್ಕೆ ಹೇಳಿದ್ದಾರೆ. ಇದರ ಬಗ್ಗೆ ಸಿಎಂ ಗಮನಹರಿಸ್ತಾರೆ” ಎಂದರು.