
ETHINA BHUJA TREKING TEMPORARY BAN
(ಅಶ್ವವೇಗ) Ashwaveega News 24×7 ಜು.02: ಮೂಡಿಗೆರೆ ತಾಲೂಕಿನ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನಭುಜ ಚಾರಣವನ್ನು ಅರಣ್ಯ ಇಲಾಖೆ ತಾತ್ಕಾಲಿಕವಾಗಿ ನಿಷೇಧಿಸಿದೆ. ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.
7 ಕಿ.ಮೀ. ಚಾರಣದ ಮೂಲಕ ಎತ್ತಿನಭುಜದ ಸೌಂದರ್ಯ ಸವಿಯುತ್ತಿದ್ದ ಪ್ರವಾಸಿಗರಿಗೆ ಈಗ ಒಂದು ತಿಂಗಳ ಕಾಲ ಬ್ರೇಕ್ ನೀಡಲಾಗಿದೆ. ಈ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ರಸ್ತೆಗಳು ಜಾರುತ್ತಿದ್ದು, ಕೆಲ ಮರಗಳು ಬೀಳುವ ಸ್ಥಿತಿಯಲ್ಲಿವೆ. ಅಲ್ಲದೇ ಇಲ್ಲಿ ಕಾಡುಪ್ರಾಣಿಗಳು ಹೆಚ್ಚಾಗಿರುವುದರಿಂದ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚು.
ಆದರಿಂದ ಇಂದಿನಿಂದ ಒಂದು ತಿಂಗಳ ಕಾಲ ಚಾರಣ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಎತ್ತಿನಭುಜ ಪ್ರದೇಶದಲ್ಲಿ ಪ್ರವಾಸಿಗರನ್ನು ತಡೆಯಲು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲು ಸೂಚನೆ ನೀಡಲಾಗಿದೆ. ಪ್ರವಾಸಿಗರ ಸುರಕ್ಷತೆಗೆ ಪ್ರಾಮುಖ್ಯತೆ ನೀಡಿರುವ ಅರಣ್ಯ ಇಲಾಖೆಯ ಕ್ರಮಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.