
many power centres in state congress political developments
ರಾಜ್ಯದಲ್ಲಿ ಪವರ್ ಸೆಂಟರ್ಗಳು ಹೆಚ್ಚಾಗಿವೆ. ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್ ನಂತರ ಭಾರಿ ಬದಲಾವಣೆ ಆಗಲಿದೆ ಎಂದು ಸಹಕಾರ ಇಲಾಖೆ ಸಚಿವ ಕೆ. ಎನ್. ರಾಜಣ್ಣ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರದ ಪವರ್ ಸೆಂಟರ್ಗಳು ಹೆಚ್ಚಾಗಿವೆ. ಹೀಗಾಗಿ ಜಂಜಾಟಗಳು ಹೆಚ್ಚಾಗಿವೆ. ನವೆಂಬರ್ ವೇಳೆಗೆ ಮಹತ್ವದ ಬದಲಾವಣೆಯಾಗಲಿದ್ದು, ಎಲ್ಲವೂ ಸರಿಹೋಗಲಿದೆ ಎಂದು ಕುತೂಹಲದ ಹೇಳಿಕೆ ನೀಡಿದ್ದಾರೆ.
2013-2018ರ ನಡುವೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಖದರ್ ಈಗ ಕಾಣುತ್ತಿಲ್ಲ ಎಂಬುದು ಜನರ ಅಭಿಪ್ರಾಯ. ಇದಕ್ಕೆ ಕಾಂಗ್ರೆಸ್ನಲ್ಲಿರುವ ಪವರ್ ಸೆಂಟರ್ಗಳೇ ಕಾರಣ. ಒಂದು, ಎರಡು, ಮೂರು ಹೀಗೆ ಎಷ್ಟು ಬೇಕಾದರೂ ಪವರ್ ಸೆಂಟರ್ಗಳನ್ನು ಕಾಂಗ್ರೆಸ್ನಲ್ಲಿ ಲೆಕ್ಕ ಹಾಕಬಹುದು. ಸಿದ್ದರಾಮಯ್ಯ ಅವರು ತಮ್ಮ ಅನುಭವದಲ್ಲಿ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಜಂಜಾಟಗಳಂತೂ ಇದ್ದೇ ಇವೆ. ಆಗಸ್ಟ್ನಿಂದ ನವೆಂಬರ್ ನಡುವೆ ಎಲ್ಲವೂ ಸರಿಹೋಗಬಹುದು. ಬದಲಾವಣೆಯ ಸಣ್ಣ ಸುಳಿಗಾಳಿ ಬೀಸುತ್ತಿದೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ಸೂಕ್ತ ಸಮಯದಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆಯಾಗಿದೆ. ಆದರೆ ಹಣಕಾಸಿನ ಮುಗ್ಗಟ್ಟಿಲ್ಲ. ತಿಂಗಳಲ್ಲಿ 15 ರಿಂದ 20 ದಿನ ಮುಖ್ಯಮಂತ್ರಿಯವರು ಜಿಲ್ಲಾ ಪ್ರವಾಸ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದಾರೆ. ಹಣ ಇಲ್ಲದೇ ಇದ್ದರೆ ಈ ರೀತಿ ಕಾಮಗಾರಿ ಆರಂಭಿಸಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಶಾಸಕರ ನಿರೀಕ್ಷೆಗೆ ಅನುಗುಣವಾಗಿ ಅನುದಾನ ಸಿಗದೇ ಇರಬಹುದು. ಆದರೆ ಸಿಎಂ ಸಿದ್ದರಾಮಯ್ಯ ಶಕ್ತಿ ಮೀರಿ ಪಕ್ಷಭೇದ ಮರೆತು ಎಲ್ಲಾ ಶಾಸಕರ ಕ್ಷೇತ್ರಗಳಿಗೂ ಅನುದಾನ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.