Ashwaveega News 24×7 ಜನವರಿ 24 –ಬೆಂಗಳೂರು : ನಂದಿನಿ ಬಳಕೆದಾರರಿಗೆ ಕೆಎಂಎಫ್ (ಕರ್ನಾಟಕ ಹಾಲು ಮಹಾಮಂಡಳಿ) ಸಂತಸದ ಸುದ್ದಿ ನೀಡಿದೆ. ಇನ್ಮುಂದೆ ಕೇವಲ ₹10ಕ್ಕೆ ನಂದಿನಿ ಹಾಲು ಹಾಗೂ ಮೊಸರು ಲಭ್ಯವಾಗಲಿದೆ.
160 ಎಂಎಲ್ ನಂದಿನಿ ಹಾಲಿಗೆ ₹10 ಹಾಗೂ 140 ಎಂಎಲ್ ನಂದಿನಿ ಮೊಸರಿಗೆ ₹10 ದರ ನಿಗದಿಪಡಿಸಲಾಗಿದೆ. ಜೊತೆಗೆ ಪನೀರ್, ಪ್ರೊಬಯಾಟಿಕ್ ಮಾವಿನ ಲಸ್ಸಿ ಸೇರಿದಂತೆ ಹಲವು ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೆಎಂಎಫ್ನ ಹತ್ತು ಹೊಸ ಉತ್ಪನ್ನಗಳನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಗುಡ್ ಲೈಫ್ ತುಪ್ಪ, ಪನೀರ್, ಪ್ರೊ ಮಿಲ್ಕ್, ಪ್ರೊಬಯಾಟಿಕ್ ಮೊಸರು ಸೇರಿದಂತೆ ಆರೋಗ್ಯಪೂರ್ಣ ಹೊಸ ಉತ್ಪನ್ನಗಳು ಬಿಡುಗಡೆಗೊಂಡಿವೆ.
ನಂದಿನಿ ಉತ್ಪನ್ನಗಳು ತಮ್ಮ ಉತ್ತಮ ರುಚಿ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದು, ದೇಶ-ವಿದೇಶಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಗ್ರಾಹಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರುವ ಏಕೈಕ ಸಂಸ್ಥೆ ನಮ್ಮ ನಾಡಿನ ಕೆಎಂಎಫ್ (ನಂದಿನಿ) ಎನ್ನಲು ಹೆಮ್ಮೆ ಇದೆ . ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ, ಶಾಸಕರಾದ ನಂಜೇಗೌಡ, ಅಶೋಕ್ ಕುಮಾರ್ ರೈ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
