Ashwaveega News 24×7 ಜನವರಿ 24 – ಹೆಸರಿನಲ್ಲೇ ಕುತೂಹಲ ಮೂಡಿಸುವ ‘ತಿಕ್ಲು ರಾಮ’ ಚಿತ್ರದ ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರ್ನ್ನು ಸಂಕ್ರಾಂತಿ ಹಬ್ಬದ ಶುಭದಿನದಂದು ಆ ದಿನಗಳು ಖ್ಯಾತಿಯ ನಟ ಚೇತನ್ ಅವರು ಎಂಎಂಬಿ ಲೆಗಸಿ ಸಭಾಂಗಣದಲ್ಲಿ ಗಣ್ಯ ಅತಿಥಿಗಳು ಹಾಗೂ ಚಿತ್ರತಂಡದ ಸಮ್ಮುಖದಲ್ಲಿ ಅನಾವರಣಗೊಳಿಸಿದರು.
ಕರಿಷ್ಮ–ಶ್ರ್ಯಾವ್ಯ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಶೃತಿ ಜಿ.ಬಿ. ಮತ್ತು ಕೋಮಲ ನಟರಾಜು ಅವರು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಥೆ–ಚಿತ್ರಕಥೆ–ನಿರ್ದೇಶನವನ್ನು ಮಂಜುಕವಿ ಅವರು ವಹಿಸಿಕೊಂಡಿದ್ದಾರೆ.

ಸುಚೇಂದ್ರ ಪ್ರಸಾದ್ ಅವರ ಗಂಭೀರ ಧ್ವನಿಯಲ್ಲಿ “ಇದೇ ಕಾಡಿನಲ್ಲಿ ನಾನು ನಿನ್ನ ಉಸಿರು ನಿಲ್ಲಿಸದೇ ಹೋದರೆ ನನ್ನ ಹೆಸರು ಅಂತ…” ಎಂಬ ಡೈಲಾಗ್ನೊಂದಿಗೆ ಬಿಡುಗಡೆಯಾದ ಒಂದು ನಿಮಿಷದ ಟೈಟಲ್ ಟೀಸರ್ ಪ್ರೇಕ್ಷಕರ ಗಮನ ಸೆಳೆಯಿತು.ಈ ಕಾರ್ಯಕ್ರಮದಲ್ಲಿ ಡಾ. ರಾಜ್ಕುಮಾರ್ ಅವರ ಮೊಮ್ಮಗ ಷಣ್ಮುಗ ಗೋವಿಂದರಾಜ್ ಹಾಗೂ ‘ಬಡವರ ಮಕ್ಕಳು ಬೆಳೀಬೇಕು ಕಂಡ್ರಯ್ಯ’ ಚಿತ್ರದ ನಿರ್ಮಾಪಕ ಸಿ.ಎಸ್. ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಚಿತ್ರದ ತಾರಾಗಣದಲ್ಲಿ ನಾಯಕ ಡಾ. ರಾಜ್ವೀರ್ ಅವರೊಂದಿಗೆ ಸಂಗೀತ, ಮಿತ್ರ, ಭಾಗ್ಯಶ್ರೀ, ಶೃತಿ ಬಿ., ಗೋವಿಂದೇಗೌಡ, ವಿನೋದ್ ಗೊಬ್ಬರಗಾಲ, ಸುಚೇಂದ್ರ ಪ್ರಸಾದ್, ಮಂಡ್ಯ ಸಿದ್ದು, ಪವಿತ್ರ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಹಿನ್ನಲೆ ಸಂಗೀತ ವಿನು ಮನಸು, ಛಾಯಾಗ್ರಹಣ ರಾಜ್ ಕಡೂರು–ನಾಗರಾಜಮೂರ್ತಿ, ಸಂಕಲನ ವೆಂಕಿ ಯುಡಿವಿ, ಸಾಹಸ ಅಲ್ಟಿಮೇಟ್ ಶಿವು ಹಾಗೂ ನೃತ್ಯ ಜಗ್ಗು ಅವರದ್ದಾಗಿದೆ. ಮೋಷನ್ ಪೋಸ್ಟರ್ ಅನ್ನು ಎಂ.ಕೆ. ಆಡಿಯೋದಲ್ಲಿ ಬಿಡುಗಡೆ ಮಾಡಲಾಗಿದೆ.

ನಂತರ ಮಾತನಾಡಿದ ಚೇತನ್ ಅವರು, “ಸಂಪೂರ್ಣ ಕಲಾವಿದರು ಹಾಗೂ ಸಾಹಿತ್ಯದ ಮೇಲೆ ಅಪಾರ ಒಲವು ಹೊಂದಿರುವ ಮಂಜುಕವಿ ಅವರಿಂದ ಮಾತ್ರ ಇಂತಹ ವಿಭಿನ್ನ ಚಿತ್ರ ಸಾಧ್ಯ. ಚಿತ್ರರಂಗ ಬೆಳೆಯಬೇಕಾದರೆ ಕ್ರಿಯಾಶೀಲ ತಂಡ ಅಗತ್ಯ. ‘ತಿಕ್ಲು ರಾಮ’ ಹಾಸ್ಯಚಿತ್ರವಾಗಿದ್ದರೂ ಸಮಾಜಕ್ಕೆ ಸಂದೇಶ, ಕುಟುಂಬ ಮೌಲ್ಯ ಹಾಗೂ ಭಾವನಾತ್ಮಕ ಅಂಶಗಳನ್ನು ಒಳಗೊಂಡಿದೆ” ಎಂದು ಹೇಳಿದರು.
ನಿರ್ದೇಶಕ ಮಂಜುಕವಿ ಮಾತನಾಡಿ, “ಚಿತ್ರದ ಮೊದಲಾರ್ಧ ಹಳ್ಳಿಯ ಸೊಗಡಿನಲ್ಲಿ ಸಾಗಲಿದ್ದು, ದ್ವಿತೀಯಾರ್ಧ ಪ್ರೇಕ್ಷಕರನ್ನು ವಿಭಿನ್ನ ಲೋಕಕ್ಕೆ ಕರೆದೊಯ್ಯುತ್ತದೆ. ಪ್ರಾಣಿಗಳ ಅವಶ್ಯಕತೆ ಇರುವ ದೃಶ್ಯಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿಜವಾದ ಪ್ರಾಣಿಗಳನ್ನೇ ನೋಡಿದ ಅನುಭವ ನೀಡಲಾಗುತ್ತದೆ. ಸತ್ಯ ಘಟನೆಯನ್ನು ಆಧಾರವಾಗಿ ಕಥೆ ರೂಪಗೊಂಡಿದ್ದು, ರಾಮ ಹೇಗೆ ‘ತಿಕ್ಲು ರಾಮ’ ಆಗುತ್ತಾನೆ ಎಂಬುದಕ್ಕೆ ಉತ್ತರ ಚಿತ್ರಮಂದಿರದಲ್ಲಿ ಸಿಗಲಿದೆ. ಹಾಸನ ಸೇರಿದಂತೆ ಹಸಿರಿನಿಂದ ಕೂಡಿದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ. ಮಕ್ಕಳಿಂದ ವೃದ್ಧರವರೆಗೂ ನೋಡಬಹುದಾದ ಕುಟುಂಬ ಚಿತ್ರ ಇದು” ಎಂದರು.

ನಾಯಕ ಡಾ. ರಾಜ್ವೀರ್ ಮಾತನಾಡಿ, “ಬಾಲ್ಯದಲ್ಲಿ ಬುದ್ದನನ್ನು ಹುಚ್ಚ ಎಂದು, ಸ್ವಾಮಿ ವಿವೇಕಾನಂದರನ್ನು ಪಾಗಲ್ ಎಂದು ಕರೆಯಲಾಗುತ್ತಿತ್ತು. ನಂತರ ಅವರು ದೇಶಕ್ಕೆ ಮಾದರಿಯಾದರು. ಆ ಸ್ಪೂರ್ತಿಯಿಂದಲೇ ಈ ಹೆಸರನ್ನು ಆಯ್ಕೆ ಮಾಡಲಾಗಿದೆ. ಚಿತ್ರದಲ್ಲಿ ಪರಿಸರ, ಸಾಮಾಜಿಕ ಕಳಕಳಿ ಹಾಗೂ ಸಂಸಾರ ನಡೆಸುವ ಹೆಣ್ಣುಮಕ್ಕಳ ಬದುಕಿನ ಅಂಶಗಳು ಇವೆ. ಸೈಲೆಂಟ್ ಆಗಿದ್ದರೆ ರಾಮ, ಕೊಡಲಿ ಹಿಡಿದರೆ ತಿಕ್ಲು ರಾಮ. ರಕ್ತಪಾತವನ್ನು ವೈಭವೀಕರಿಸದೇ ಅರ್ಥಪೂರ್ಣ ಸಂದೇಶ ನೀಡುವ ಪ್ರಯತ್ನ ಮಾಡಿದ್ದೇವೆ” ಎಂದು ತಿಳಿಸಿದರು …
