Ashwaveega News 24×7 ಫೆಬ್ರವರಿ 2026 – ನವದೆಹಲಿ : ತಿರುಪತಿ ತಿರುಮಲ ದೇಗುಲದಲ್ಲಿ ಮಾರಾಟವಾಗುತ್ತಿರುವ ಚಿನ್ನದ ಡಾಲರ್ಗಳು ಈಗ ಜನರ ಗಮನ ಸೆಳೆಯುತ್ತಿವೆ. ಮುಕ್ತ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿದಿನ ಏರಿಳಿತ ಕಾಣುತ್ತಿದ್ದರೆ, ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ದಲ್ಲಿ ಚಿನ್ನದ ಬೆಲೆ ವಾರಕ್ಕೊಮ್ಮೆ ಮಾತ್ರ ಪರಿಷ್ಕರಣೆಯಾಗುತ್ತಿದೆ. ಇದರಿಂದಾಗಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಚಿನ್ನ ಲಭ್ಯವಾಗುತ್ತಿದ್ದು, ಜನರು ಹಾಗೂ ಹೂಡಿಕೆದಾರರು ತಿಮ್ಮಪ್ಪನ ಗೋಲ್ಡ್ ಡಾಲರ್ಗಳ ಖರೀದಿಗೆ ಮುಗಿಬಿದ್ದಿದ್ದಾರೆ .
ಟಿಟಿಡಿ ವತಿಯಿಂದ 10, 5 ಹಾಗೂ 2 ಗ್ರಾಂ ಚಿನ್ನದ ಡಾಲರ್ಗಳು ಮತ್ತು 50, 10, 5 ಗ್ರಾಂ ಬೆಳ್ಳಿಯ ಡಾಲರ್ಗಳನ್ನು ಮಾರಾಟ ಮಾಡಲಾಗುತ್ತಿದೆ. ವೆಂಕಟೇಶ್ವರನ ಮೂರ್ತಿ ರೂಪದ ಈ ಡಾಲರ್ಗಳನ್ನು ಖರೀದಿಸಿದರೆ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಗಟ್ಟಿಯಾಗಿ ಇದೆ. ಈ ಕಾರಣದಿಂದ ಪ್ರತಿ ಮಂಗಳವಾರ ಮಧ್ಯರಾತ್ರಿಯಿಂದಲೇ ಡಾಲರ್ ಮಾರಾಟಕ್ಕೆ ಭಾರೀ ಜನಸಂದಣಿ ಕಾಣಿಸುತ್ತಿದೆ .
ಇತ್ತೀಚಿನ ಮಂಗಳವಾರ ಟಿಟಿಡಿ 10 ಗ್ರಾಂ ಚಿನ್ನದ ಬೆಲೆಯನ್ನು ರೂ. 1,55,855 ಎಂದು ನಿಗದಿಪಡಿಸಿತ್ತು. ಕಳೆದ ಮಂಗಳವಾರದಿಂದಲೂ ಇದೇ ದರದಲ್ಲಿ ಚಿನ್ನ ಮಾರಾಟವಾಗುತ್ತಿದೆ. ಆದರೆ ಈ ಅವಧಿಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ. 1.88 ಲಕ್ಷದವರೆಗೂ ಏರಿಕೆಯಾಗಿದೆ. ಇದರಿಂದ ಟಿಟಿಡಿ ದರ ಹಾಗೂ ಹೊರಗಿನ ಮಾರುಕಟ್ಟೆ ದರಗಳ ನಡುವೆ ದೊಡ್ಡ ಅಂತರ ಉಂಟಾಗಿದೆ .
ಈ ಬೆಲೆ ವ್ಯತ್ಯಾಸವನ್ನೇ ಬಂಡವಾಳ ಮಾಡಿಕೊಂಡ ಕೆಲವರು ದೊಡ್ಡ ಪ್ರಮಾಣದಲ್ಲಿ ತಿರುಮಲದಲ್ಲಿ ಚಿನ್ನದ ಡಾಲರ್ಗಳನ್ನು ಖರೀದಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದರಿಂದ ಟಿಟಿಡಿಗೆ ಆರ್ಥಿಕ ನಷ್ಟವಾಗುವ ಸಾಧ್ಯತೆ ಇದೆ ಎಂಬ ಚರ್ಚೆಯೂ ಆರಂಭವಾಗಿದೆ .
ಒಟ್ಟಿನಲ್ಲಿ, ತಿರುಮಲದಲ್ಲಿ ಚಿನ್ನದ ಡಾಲರ್ ಮಾರಾಟ ದಿಢೀರ್ ಆಗಿ ಹೆಚ್ಚಾಗಿದ್ದು, ಇದು ಭಕ್ತಿಯ ಜೊತೆಗೆ ಹೂಡಿಕೆಯ ದೃಷ್ಟಿಯಿಂದಲೂ ಜನರನ್ನು ಆಕರ್ಷಿಸುತ್ತಿದೆ. ಮುಂದಿನ ದಿನಗಳಲ್ಲಿ ಟಿಟಿಡಿ ಚಿನ್ನದ ಬೆಲೆ ನಿಗದಿ ನೀತಿಯಲ್ಲಿ ಬದಲಾವಣೆ ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ .
