Ashwaveega News 24×7 ಫೆಬ್ರವರಿ 03 -2026 – ಮೈಸೂರು : ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಲ್ಲೇ ಬೈಕ್ ವ್ಹೀಲಿಂಗ್ ಹಾವಳಿ ಮಿತಿಮೀರಿದ್ದು, ಪುಂಡ-ಪೋಕರಿಗಳಿಗೆ ಪೊಲೀಸ್ ಖಾಕಿಯೇ ಭಯವಾಗಿಲ್ಲವೇ ಎಂಬ ಪ್ರಶ್ನೆ ಎದ್ದಿದೆ. ವ್ಹೀಲಿಂಗ್ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ ವ್ಯಕ್ತಿಯೊಬ್ಬರ ಮೇಲೆ ಯುವಕರ ಗುಂಪೊಂದು ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹುಣಸೂರು ತಾಲೂಕು ಕಿರಿಜಾಜಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಸ್ತೆಯಲ್ಲಿ ಅಶಿಸ್ತಿನ ರೀತಿಯಲ್ಲಿ ಬೈಕ್ ವ್ಹೀಲಿಂಗ್ ನಡೆಸುತ್ತಿದ್ದ ಯುವಕರಿಗೆ ಸ್ಥಳೀಯ ನಿವಾಸಿಯೊಬ್ಬರು ತಡೆಯಲು ಮುಂದಾದಾಗ, ಅದರಿಂದ ಆಕ್ರೋಶಗೊಂಡ ಸುಮಾರು 12 ಮಂದಿ ಪುಂಡರು ಆತನ ಮನೆಗೆ ನುಗ್ಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ವ್ಹೀಲಿಂಗ್ ಮಾಡಬೇಡಿ ಎಂದು ಹೇಳಿದ್ದೇ ಈ ಹಲ್ಲೆಗೆ ಕಾರಣವಾಗಿದೆ ..
ಘಟನೆಯ ಭೀಕರ ದೃಶ್ಯಗಳು ಮನೆಯಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಯುವಕರ ಗುಂಪು ನಿರ್ದಯವಾಗಿ ಹಲ್ಲೆ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯುಂಟು ಮಾಡುವ ಈ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಘಟನೆ ಮಾಹಿತಿ ತಿಳಿದ ಕೂಡಲೇ ಹುಣಸೂರು ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಗಳ ಆಧಾರದಲ್ಲಿ ಹಲ್ಲೆ ನಡೆಸಿದ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದಲ್ಲಿ ರಸ್ತೆ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕುರಿತು ಸರ್ಕಾರ ಗಂಭೀರ ಹೇಳಿಕೆಗಳನ್ನು ನೀಡುತ್ತಿದ್ದರೂ, ಸಿಎಂ ತವರು ಜಿಲ್ಲೆಯಲ್ಲೇ ಇಂತಹ ಪುಂಡಾಟಿಕೆ ನಡೆಯುತ್ತಿರುವುದು ಪೊಲೀಸ್ ವ್ಯವಸ್ಥೆಯ ಮೇಲಿನ ಪ್ರಶ್ನೆಗಳನ್ನು ಎಬ್ಬಿಸಿದೆ. ವ್ಹೀಲಿಂಗ್ ಹಾವಳಿ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
