Ashwaveega News 24×7 ಫೆಬ್ರವರಿ 18 -2026 ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಬಗ್ಗೆ ಚರ್ಚೆ ಆಗ್ತಾಯಿದೆ . ಬಿಜೆಪಿ ಜೊತೆ ಮೈತ್ರಿ ವಿಚಾರದಲ್ಲಿ ಸ್ಪಷ್ಟ ನಿಲುವು ತಳೆದ ಅವರು, “ನಿಮ್ಮ ದಾರಿ ನಿಮಗೆ, ನಮ್ಮ ದಾರಿ ನಮಗೆ” ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಸಿದ್ಧಾಂತಗಳ ನಡುವೆ ಮೂಲಭೂತ ವ್ಯತ್ಯಾಸವಿದೆ ಎಂದು ಹೇಳಿದ ನಿಖಿಲ್, “ಬಿಜೆಪಿ ಸಿದ್ಧಾಂತವೇ ಬೇರೆ, ಜೆಡಿಎಸ್ ಸಿದ್ಧಾಂತವೇ ಬೇರೆ. ಬಿಜೆಪಿ ಜೊತೆ ಇದ್ದರೂ ಜೆಡಿಎಸ್ ತನ್ನ ಮೂಲ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವುದಿಲ್ಲ” ಎಂದು ಸ್ಪಷ್ಟಪಡಿಸಿದರು .
“ಬಿಜೆಪಿ ಜೊತೆ ಅಧಿಕಾರ ಹಂಚಿಕೆ ಎಂಬುದು ರಾಷ್ಟ್ರೀಯ ವರಿಷ್ಠರ ಮಟ್ಟದಲ್ಲಿ ನಿರ್ಧಾರವಾಗುವ ವಿಚಾರ. ಸ್ಥಳೀಯ ಮಟ್ಟದಲ್ಲಿ ಇದನ್ನು ಚರ್ಚಿಸುವ ಅಗತ್ಯವಿಲ್ಲ” ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಂಡಕ್ಕೆ ಡೈರೆಕ್ಟ್ ಟಕ್ಕರ್ ನೀಡಿದ ನಿಖಿಲ್, ಬಿಜೆಪಿ-ಜೆಡಿಎಸ್ ಮೈತ್ರಿ ನೈಸರ್ಗಿಕ ಮೈತ್ರಿಯೇ ಆಗಿದ್ದು, ಇದರ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಹೇಳಿದರು.
ಆದರೆ, “ಇವತ್ತಿಗೂ ನಾವು ಹೃದಯದಿಂದಲೇ ಜಾತ್ಯಾತೀತರು” ಎಂಬ ಮಾತಿನ ಮೂಲಕ ಜೆಡಿಎಸ್ ತನ್ನ ಧೋರಣೆಯಲ್ಲಿ ಅಚಲವಾಗಿದೆ ಎಂಬ ಸಂದೇಶವನ್ನು ಅವರು ರವಾನಿಸಿದರು. ರಾಜಕೀಯ ವಲಯದಲ್ಲಿ ನಿಖಿಲ್ ಹೇಳಿಕೆ ಹಲವು ಅರ್ಥಗಳಿಗೆ ದಾರಿ ಮಾಡಿಕೊಟ್ಟಿದ್ದು, ಮೈತ್ರಿ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
