Ashwaveega News 24×7 ಫೆಬ್ರವರಿ 18 -2026 : ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿರುವ ‘ರಾಜನಿವಾಸ’ ಚಿತ್ರ ಏಪ್ರಿಲ್ನಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಟ್ರೇಲರ್ ನೋಡಿದ ಕ್ಷಣಕ್ಕೆ ಕಾಂತಾರ ಚಿತ್ರದ ಝಲಕ್ ಕಾಣಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಆದರೆ ನಿರ್ದೇಶಕ ಮಿಥುನ್ ಸುವರ್ಣ ಮಾತನಾಡಿ , ‘ರಾಜನಿವಾಸ’ ಕಥಾ ಕಲ್ಪನೆ ಕಾಂತಾರಕ್ಕಿಂತಲೂ ಮೊದಲು ಸಿದ್ಧವಾಗಿದ್ದು, ಚಿತ್ರ ರೂಪಕ್ಕೆ ಬರಲು ಮಾತ್ರ ವಿಳಂಬವಾಗಿದೆ . ಕಾಂತಾರ ಬಿಡುಗಡೆಯಾದ ನಂತರ ಹೋಲಿಕೆಗಳ ಆರೋಪ ಎದುರಾಗಬಹುದು ಎಂಬ ಆತಂಕದಿಂದ ಕೆಲ ಬದಲಾವಣೆಗಳನ್ನೂ ಮಾಡಲಾಗಿದೆ. ತುಳುನಾಡಿನ ಹಿನ್ನಲೆಯಲ್ಲಿ ಕಥೆ ಸಾಗುವುದರಿಂದ ಸಹಜವಾಗಿ ಕೆಲವು ಸಾಮ್ಯತೆಗಳು ಕಾಣಿಸಬಹುದು, ಆದರೆ ಕಥಾಹಂದರ ಸಂಪೂರ್ಣ ವಿಭಿನ್ನವಾಗಿದೆ .

ಚಿತ್ರದಲ್ಲಿ ನಾಯಕನಾಗಿ ರಾಘವ್ ರಾಜನಂತೆ ಮೆರೆದಾಡಿದ್ದು, ಟ್ರೇಲರ್ನ ಹಾಡು ಮತ್ತು ಆ್ಯಕ್ಷನ್ ಗ್ಲಿಂಪ್ಸ್ ಚಿತ್ರವನ್ನು ಮಾಸ್ ಎಂಟರ್ಟೈನರ್ ಆಗಿ ತೋರಿಸಿವೆ. ನಾಯಕಿಯಾಗಿ ಕೃತ್ತಿಕಾ ಕಂಗೊಳಿಸಿದ್ದು, ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಲ ರಾಜ್ವಾಡಿ, ಯಮುನಾ ಶ್ರೀನಿಧಿ, ನೀನಾಸಂ ಅಶ್ವಥ್, ಸಹನ, ಪ್ರಶಾಂತ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಟ್ರೇಲರ್ ಹಾಗೂ ಮೂರು ಹಾಡುಗಳು ಈಗಾಗಲೇ ಪ್ರೇಕ್ಷಕರ ಮನ ಗೆದ್ದಿವೆ. ಟ್ರೇಲರ್ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿದೆ. ಸಿನಿಮಾರಂಗದ ಅನೇಕರು ‘ರಾಜನಿವಾಸ’ ಈ ವರ್ಷದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಅಂತಿಮ ಹಂತದಲ್ಲಿದ್ದು, ಇದೇ ತಿಂಗಳ ಅಂತ್ಯಕ್ಕೆ ಬಿಡುಗಡೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ.
ಕನ್ನಡದ ಪ್ರಮುಖ ವಿತರಕ ಸಂಸ್ಥೆಗಳು ಚಿತ್ರದ ಬಿಡುಗಡೆ ಹಕ್ಕಿಗಾಗಿ ಮುಂದೆ ಬಂದಿರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಕೂಡ ಉತ್ತಮ ಬೇಡಿಕೆ ವ್ಯಕ್ತವಾಗಿದೆ.

‘ರಾಜನಿವಾಸ’ ಚಿತ್ರವನ್ನು ಡಿಎಎಂ36 ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದ್ದು, ನಿರ್ಮಾಪಕರಾಗಿ ಡಾ. ಪಿ. ಆಂಜನಪ್ಪ ಹಾಗೂ ಸಹ ನಿರ್ಮಾಪಕರಾಗಿ ಲೋಕೇಶ್ ಗೌಡ ಕೈಜೋಡಿಸಿದ್ದಾರೆ. ವಿಜಯ್ ಯಾರ್ಡ್ಲಿ ಸಂಗೀತ ನಿರ್ದೇಶನ ನೀಡಿದ್ದು, ಛಾಯಾಗ್ರಹಣ ರಮೇಶ್ ರಾಜ್ ನೀಡಿದ್ದಾರೆ . ಏಪ್ರಿಲ್ನಲ್ಲಿ ‘ರಾಜನಿವಾಸ’ ಯಾವ ಮಟ್ಟಿಗೆ ಪ್ರೇಕ್ಷಕರ ಮನ ಗೆಲ್ಲಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
