Ashwaveega News 24×7 ಫೆಬ್ರವರಿ 18 -2026 : ತುಳುನಾಡಿನ ಕಂಬಳ ಸಂಸ್ಕೃತಿಯ ಮಹಿಮೆ ತೆರೆ ಮೇಲೆ ಮೂಡಿಬರಲಿರುವ ಬಹುನಿರೀಕ್ಷಿತ ಚಿತ್ರ ವೀರ ಕಂಬಳ ಟ್ರೈಲರ್ ಭರ್ಜರಿಯಾಗಿ ಬಿಡುಗಡೆಯಾಗಿದೆ.
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಕನಸಿನ ಪ್ರಾಜೆಕ್ಟ್ ಆಗಿರುವ ಈ ಚಿತ್ರ , ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕಂಬಳದ ವೈಭವವನ್ನು ಮೊದಲ ಬಾರಿಗೆ ಸಮಗ್ರವಾಗಿ ಚಿತ್ರರೂಪದಲ್ಲಿ ಹಿಡಿದಿಡಲು ಪ್ರಯತ್ನಿಸಿರುವುದಾಗಿ ಹೇಳಲಾಗಿದೆ. ತುಳುನಾಡಿನ ನೆಲದ ನಂಟು ಹೊಂದಿರುವ ಬಾಬು ಅವರು ದಶಕಗಟ್ಟಲೆ ಸಂಶೋಧನೆ ನಡೆಸಿ ಈ ಕಥೆಯನ್ನು ರೂಪಿಸಿದ್ದಾಗಿ ತಿಳಿಸಿದರು.

ಟ್ರೈಲರ್ ಅನ್ನು ನಾದಬ್ರಹ್ಮ ಹಂಸಲೇಖ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, “ಕಲೆ ಎಂದರೆ ಮುಪ್ಪಿಲ್ಲದ, ಸುಕ್ಕಿಲ್ಲದ ಕನ್ಯೆ . ಅದು ಮನುಷ್ಯನನ್ನು ಸದಾ ಜೀವಂತವಾಗಿಡುತ್ತದೆ. ಕಂಬಳದ ವೀರತ್ವಕ್ಕೆ ಕಲೆಯ ತಾಂಬೂಲವೇ ‘ವೀರ ಕಂಬಳ’” ಎಂದು ಚಿತ್ರವನ್ನು ವಿಶ್ಲೇಷಿಸಿದರು. ತಂಡದ ಎಲ್ಲರಿಗೂ ಶುಭ ಹಾರೈಸಿ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಆಶಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜೇಂದ್ರ ಸಿಂಗ್ ಬಾಬು ಅವರು, ಕಂಬಳದ ಸುತ್ತ ಹೆಣೆದಿರುವ ರೋಚಕ ಕಥಾಹಂದರದ ಬಗ್ಗೆ ವಿವರಿಸಿದರು. ವಿಶೇಷವಾಗಿ ಕಂಬಳದ ಹಿನ್ನೆಲೆಯೊಂದಿಗೆ ಮುಂಬೈ ಭೂಗತ ಜಗತ್ತಿನ ನಂಟು ಹೊಂದಿರುವ ಕುತೂಹಲಕಾರಿ ಅಂಶಗಳು ಕಥೆಯಲ್ಲಿ ಅಡಕವಾಗಿರುವುದಾಗಿ ಸುಳಿವು ನೀಡಿದರು. ಚಿತ್ರಕಥೆ ಮತ್ತು ಸಂಭಾಷಣೆಯನ್ನು ತುಳು ರಂಗಭೂಮಿಯ ಖ್ಯಾತ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ಬೈಲ್ ರಚಿಸಿದ್ದಾರೆ. ಕಂಬಳದ ಬಗ್ಗೆ ನಿಖರ ಮಾಹಿತಿಯನ್ನು ಒದಗಿಸಿದ ಗುಣಪಾಲ್ ಕಡಂಬ ಸೇರಿದಂತೆ ಅನೇಕರು ಈ ಪ್ರಯತ್ನಕ್ಕೆ ಬೆಂಬಲ ನೀಡಿದ್ದಾರೆ.

ಬಾಬಾ’ಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರ್ನಲ್ಲಿ ಡಾ. ವಿನಿತ ವಿಜಯ್ ಕುಮಾರ್ ರೆಡ್ಡಿ ಮತ್ತು ಅರುಣ್ ರೈ ತೊಡಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಆದಿತ್ಯ, ಪ್ರಕಾಶ್ ರೈ, ರವಿಶಂಕರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ರಾಧಿಕಾ ನಾರಾಯಣ್ ಅಭಿನಯಿಸಿದ್ದಾರೆ. ತುಳು ಆವೃತ್ತಿಯಲ್ಲಿಯೂ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ಹಲವು ಪ್ರಸಿದ್ಧ ತುಳು ಕಲಾವಿದರು ಅಭಿನಯಿಸಿದ್ದಾರೆ.
ಸಂಗೀತವನ್ನು ಮಣಿಕಾಂತ್ ಕದ್ರಿ ಸಂಯೋಜಿಸಿದ್ದು, ಆರ್. ಗಿರಿ ಅವರ ಛಾಯಾಗ್ರಹಣ, ಶ್ರೀನಿವಾಸ್ ಎಸ್ ಬಾಬು ಅವರ ಸಂಕಲನ, ಚಂದ್ರಶೇಖರ್ ಸುವರ್ಣ ಮುಲ್ಕಿ ಅವರ ಕಲಾ ನಿರ್ದೇಶನ ಚಿತ್ರಕ್ಕೆ ವಿಶೇಷ ಮೆರಗು ನೀಡಿವೆ.
ತುಳು ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ‘ವೀರ ಕಂಬಳ’ ಫೆಬ್ರವರಿ 27ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಕಂಬಳದ ಸಾಂಸ್ಕೃತಿಕ ವೈಭವ, ವೀರತ್ವ ಮತ್ತು ರೋಚಕ ಕಥಾಹಂದರದೊಂದಿಗೆ ಈ ಚಿತ್ರ ಪ್ರೇಕ್ಷಕರ ಮನಗೆಲ್ಲುವ ನಿರೀಕ್ಷೆ ಮೂಡಿಸಿದೆ.
