Ashwaveega News 24×7 ಫೆಬ್ರವರಿ 20 – 2026 ಬೆಂಗಳೂರು : ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣರನ್ನು ಬೆಂಗಳೂರು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ.
ಸಿಎಂ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದ ಸ್ನೇಹಮಯಿ ಕೃಷ್ಣ, ಮುಡಾ ಪ್ರಕರಣ ಕೆದಕಿ ಹೋರಾಟ ನಡೆಸಿದ್ದರು. ಈ ನಡುವೆ ಮುಡಾ ಕೇಸ್ ವಿಚಾರದಲ್ಲೇ ನಟೇಶ್ ವಿರುದ್ಧ ಆಡಿಯೋ ಬಾಂಬ್ ಸಿಡಿಸಿ ಹೊಸ ವಿವಾದಕ್ಕೆ ಕಾರಣರಾಗಿದ್ದರು.
ಪ್ರಮೋಷನ್ ವಿಚಾರದಲ್ಲಿ ಒಂದೂವರೆ ಕೋಟಿ ರೂಪಾಯಿ ಲಂಚ ಪಡೆದ ಆರೋಪವನ್ನು ನಟೇಶ್ ಮೇಲೆ ಹೊರಿಸಿದ್ದರು. ಅಲ್ಲದೆ ಸಿಎಸ್ ಶಾಲಿನಿ ರಜನೀಶ್ ವಿರುದ್ಧವೂ ಲಂಚದ ಆರೋಪ ಮಾಡಿ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದರು.
ಈ ಸಂಬಂಧ ನಟೇಶ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಬೆಂಗಳೂರು ಸೈಬರ್ ಕ್ರೈಮ್ ಪೊಲೀಸರು ತನಿಖೆ ನಡೆಸಿ, ಇದೀಗ ಸ್ನೇಹಮಯಿ ಕೃಷ್ಣರನ್ನು ಬಂಧಿಸಿದ್ದಾರೆ.
ಸ್ನೇಹಮಯಿ ಕೃಷ್ಣರ ಬಂಧನ ರಾಜ್ಯದಲ್ಲಿ ಮತ್ತಷ್ಟು ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ಹರಿದಿದೆ.
