Ashwaveega News 24×7 ಫೆಬ್ರವರಿ 20 – 2026 ಬೆಂಗಳೂರು : ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ದರ ಏರಿಕೆಯ ಶಾಕ್ ಎದುರಾಗಿದೆ. ಏಪ್ರಿಲ್ 1ರಿಂದ ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳವಾಗುವ ಸಾಧ್ಯತೆ ಇದ್ದು, ಪ್ರತಿ ಯೂನಿಟ್ಗೆ 20 ರಿಂದ 33 ಪೈಸೆಯವರೆಗೆ ಏರಿಕೆ ಮಾಡುವ ಪ್ರಸ್ತಾವನೆ ಸಲ್ಲಿಸಲಾಗಿದೆ.
ರಾಜ್ಯದ ವಿವಿಧ ಎಸ್ಕಾಂಗಳು ಇಂಧನ ಖರ್ಚು, ನಿರ್ವಹಣಾ ವೆಚ್ಚ ಹಾಗೂ ಇತರೆ ಆರ್ಥಿಕ ಭಾರ ಹೆಚ್ಚಳವನ್ನು ನೆಪವಾಗಿ ತೋರಿಸಿ ದರ ಪರಿಷ್ಕರಣೆಗೆ ಮನವಿ ಮಾಡಿವೆ. ದಿನಬಳಕೆ ವಿದ್ಯುತ್ ಹಾಗೂ ಕೈಗಾರಿಕಾ ಬಳಕೆಯ ವಿದ್ಯುತ್ ದರದಲ್ಲೂ ಏರಿಕೆ ಮಾಡಲಾಗುತ್ತಿದೆ .
ಈ ಸಂಬಂಧ ಇಂದು ಜನರ ಅಭಿಪ್ರಾಯ ಸಂಗ್ರಹಣೆ ನಡೆಸಲಾಗುತ್ತಿದ್ದು, ಆಕ್ಷೇಪಣೆಗಳ ಪರಿಶೀಲನೆಯ ಬಳಿಕ Karnataka Electricity Regulatory Commission (KERC) ಅಂತಿಮ ಆದೇಶ ಪ್ರಕಟಿಸುವ ಸಾಧ್ಯತೆ ಇದೆ.
ಒಂದು ಕಡೆ ಸರ್ಕಾರ ಗೃಹ ಬಳಕೆದಾರರಿಗೆ ‘ಗೃಹಜ್ಯೋತಿ’ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದೆ. ಆದರೆ ಮತ್ತೊಂದು ಕಡೆ ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ಜನತೆಗೆ ಕರೆಂಟ್ ಶಾಕ್ ನೀಡಿದಂತಾಗಿದೆ ಎಂಬ ಟೀಕೆ ಕೇಳಿಬರುತ್ತಿದೆ.
‘ಗೃಹಜ್ಯೋತಿ’ ಯೋಜನೆಯ ಪರಿಣಾಮವಾಗಿ ಎಸ್ಕಾಂಗಳು ಸುಮಾರು 4,500 ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಆರ್ಥಿಕ ಒತ್ತಡವನ್ನು ಸರಿದೂಗಿಸುವ ಭಾಗವಾಗಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ.
ವಿದ್ಯುತ್ ದರ ಏರಿಕೆಯಿಂದ ಸಾಮಾನ್ಯ ಜನತೆ ಹಾಗೂ ಕೈಗಾರಿಕೆಗಳಿಗೆ ಹೆಚ್ಚುವರಿ ಭಾರ ಬೀಳಲಿದ್ದು, ರಾಜ್ಯದಲ್ಲಿ ಮತ್ತೊಂದು ದರ ಏರಿಕೆ ಚರ್ಚೆಗೆ ಕಾರಣವಾಗಿದೆ.
