Ashwaveega News 24×7 ಫೆಬ್ರವರಿ 24 – 2026 ಬೆಂಗಳೂರು : ಸ್ಯಾಂಡಲ್ವುಡ್ನಲ್ಲಿ ಲವ್, ಕ್ರೈಮ್, ಸಸ್ಪೆನ್ಸ್, ಹಾರರ್ ಸೇರಿದಂತೆ ಹಲವು ಜಾನರ್ಗಳ ಸಿನಿಮಾಗಳು ನಿರಂತರವಾಗಿ ಬಿಡುಗಡೆಯಾಗುತ್ತಿವೆ. ಆದರೆ ಈ ಎಲ್ಲಾ ಪ್ರವಾಹಗಳ ನಡುವೆ ವಿಭಿನ್ನ ವಿಷಯವೊಂದನ್ನು ಹಿಡಿದು ಪ್ರೇಕ್ಷಕರ ಮುಂದೆ ಬಂದಿರುವ ಸಿನಿಮಾ Whispers of the River. ಪ್ರಕೃತಿ, ನದಿ ಮತ್ತು ಕೃಷಿಯ ಜೊತೆಗಿನ ನಮ್ಮ ಬಾಂಧವ್ಯವನ್ನು ಮರುಪರಿಶೀಲಿಸುವ ಸಾಮಾಜಿಕ ಕಳಕಳಿಯ ಚಿತ್ರವಾಗಿ ಇದು ಗಮನ ಸೆಳೆಯುತ್ತಿದೆ.
ಈ ಸಿನಿಮಾವನ್ನು ಕೆ. ಪ್ರಭಾಕರನ್ ನಿರ್ದೇಶಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಂಜುನಾಥ್ ಪೈ ಅವರು ಕೇವಲ ನಟನೆಯಷ್ಟೇ ಅಲ್ಲ, ಚಿತ್ರಕಥೆಯನ್ನೂ ರಚಿಸಿದ್ದಾರೆ. ಸ್ನೇಹಿತರಾದ ರಾಧಾಕೃಷ್ಣ ಪೈ, ವಿವೇಕ್ ವಿನ್ಸೆಂಟ್ ಮತ್ತು ಶ್ರೀರಾಮ್ ಸಿ ಅವರು Meena’s Studio ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.

ಚಿತ್ರದ ವಿಶೇಷತೆಯೆಂದರೆ, ರೈತರ ಬದುಕಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ವೃತ್ತಿಪರರು,. ನದಿಗಳೊಂದಿಗೆ ನಮ್ಮ ಸಂಬಂಧ ಏನು ? ಅಭಿವೃದ್ಧಿಯ ಹೆಸರಿನಲ್ಲಿ ನಾವು ಏನು ಕಳೆದುಕೊಳ್ಳುತ್ತಿದ್ದೇವೆ ? ಎಂಬ ಪ್ರಶ್ನೆಗಳನ್ನು ಚಿತ್ರ ಮನಮುಟ್ಟುವ ರೀತಿಯಲ್ಲಿ ಎತ್ತಿಹಿಡಿಯುತ್ತದೆ.
ಕೃಷಿ ಸಂಬಂಧಿತ ವ್ಯವಹಾರವನ್ನು ವಿಸ್ತರಿಸುವ ಕನಸು ಹೊಂದಿರುವ ಮಗ ನಗರದಲ್ಲಿ ಕೆಲಸ ಬಿಟ್ಟು ಊರಿಗೆ ಮರಳುತ್ತಾನೆ. ಆದರೆ ತಂದೆ-ಮಗನ ವಿಭಿನ್ನ ದೃಷ್ಟಿಕೋನಗಳು ಸಂಘರ್ಷಕ್ಕೆ ಕಾರಣವಾಗುತ್ತವೆ. ನಂತರ ಮಗ ಮಣ್ಣು, ನದಿ ಮತ್ತು ಮೂಲ ಮೌಲ್ಯಗಳೊಂದಿಗೆ ತನ್ನ ಬಾಂಧವ್ಯವನ್ನು ಮರು ಕಂಡುಕೊಳ್ಳುತ್ತಾನೆ.

ಸಂಗೀತವನ್ನು ರೋಹಿತ್ ಪೂಜಾರಿ ನೀಡಿದ್ದಾರೆ. ಛಾಯಾಗ್ರಹಣವನ್ನು ಕೆ. ಸತ್ಯರಾಜ್ ನಿರ್ವಹಿಸಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಶಬಾನಾ, Prabhakar Kunder ಹಾಗೂ ದಿವಂಗತ ಪ್ರಭಾಕರ್ ಕಲ್ಯಾಣಿ ಅಭಿನಯಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಟೀಸರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಪ್ರಿಮಿಯರ್ ಶೋಗಳಲ್ಲಿ ಸಿನಿ ಗಣ್ಯರು ಮತ್ತು ಪ್ರೇಕ್ಷಕರು ಚಿತ್ರದ ವಿಷಯವಸ್ತುವನ್ನು ಮೆಚ್ಚಿದ್ದಾರೆ.
ಪ್ರಕೃತಿಯೊಂದಿಗೆ ಮಾತಾಡುವ, ನದಿಗಳ ಮಹತ್ವವನ್ನು ನೆನಪಿಸುವ ಈ ಸಿನಿಮಾ ಕನ್ನಡ ಸಿನೆಮಾದಲ್ಲಿ ಹೊಸ ಅಲೆಯ ಸಂಕೇತವಾಗಿ ಕಾಣಿಸಿಕೊಂಡಿದೆ. ಶೀಘ್ರದಲ್ಲೇ OTT ವೇದಿಕೆಯಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ಪ್ರೇಕ್ಷಕರಲ್ಲಿ ಚಿಂತನೆ ಹುಟ್ಟಿಸುವ ನಿರೀಕ್ಷೆ ಮೂಡಿಸಿದೆ …

