Ashwaveega News 24×7 ಫೆಬ್ರವರಿ 25 – 2026 ಬಾಗಲಕೋಟೆ : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಜಾನಪದ ಗಾಯಕ “ಮ್ಯೂಸಿಕ್ ಮೈಲಾರಿ”ಗೆ ಮಹತ್ವದ ರಿಲೀಫ್ ದೊರೆತಿದೆ . ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಅವರನ್ನು ಬಾಗಲಕೋಟೆ ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ .
ಜಾನಪದ ಗಾಯಕನಾಗಿ ಪ್ರಸಿದ್ಧಿಯಾಗಿದ್ದ ಮೈಲಾರಿ ವಿರುದ್ಧ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಡಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ, ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಅವರನ್ನು ಬಾಗಲಕೋಟೆ ಜಿಲ್ಲೆ ಕಾರಾಗೃಹದಲ್ಲಿ ಇರಿಸಲಾಗಿತ್ತು.
ಇತ್ತೀಚೆಗೆ ನಡೆದ ವಿಚಾರಣೆಯಲ್ಲಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದು, ಕಾನೂನು ಪ್ರಕ್ರಿಯೆಗಳ ನಂತರ ಮೈಲಾರಿ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಪ್ರಕರಣದ ವಿಚಾರಣೆ ಮುಂದುವರಿದಿದ್ದು, ನ್ಯಾಯಾಲಯದ ಅಂತಿಮ ತೀರ್ಪು ಬಾಕಿಯಿದೆ.
ಮೈಲಾರಿ ಬಿಡುಗಡೆಗೊಂಡ ಸುದ್ದಿ ಹೊರಬಿದ್ದ ತಕ್ಷಣ, ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. “ಅಂತು ಇಂತು ನಮ್ಮ ಹುಲಿ ಆಚೆ ಬಂತು”, “ಜಾನಪದ ಲೋಕಕ್ಕೆ ಮತ್ತೆ ಮೆರಗು” ಎಂಬಂತೆಯೇ ಹಲವು ಪೋಸ್ಟ್ಗಳು ವೈರಲ್ ಆಗಿವೆ. ಕೆಲವರು ಮೈಲಾರಿಯನ್ನು ಬೆಂಬಲಿಸಿ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರೆ, ಮತ್ತೊಂದೆಡೆ ಪ್ರಕರಣದ ಗಂಭೀರತೆ ಹಿನ್ನೆಲೆಯಲ್ಲಿ ಕೆಲವು ವಲಯಗಳಲ್ಲಿ ಚರ್ಚೆ ಮುಂದುವರಿದಿದೆ .
ಕಾನೂನು ತಜ್ಞರ ಪ್ರಕಾರ, ಜಾಮೀನು ಮಂಜೂರು ಆಗಿರುವುದು ಆರೋಪ ಮುಕ್ತಿಯ ಅರ್ಥವಲ್ಲ; ವಿಚಾರಣೆ ಪೂರ್ಣಗೊಂಡ ಬಳಿಕವೇ ಅಂತಿಮ ತೀರ್ಪು ಹೊರಬೀಳಲಿದೆ . ಈ ಹಿನ್ನೆಲೆಯಲ್ಲಿ ಪ್ರಕರಣದ ಮುಂದಿನ ವಿಚಾರಣೆ ಮೇಲೆ ಸಾರ್ವಜನಿಕರ ಗಮನ ಕೇಂದ್ರೀಕೃತವಾಗಿದೆ .
ಒಟ್ಟಿನಲ್ಲಿ, ಜಾನಪದ ಲೋಕದಲ್ಲಿ ಹೆಸರು ಮಾಡಿದ್ದ ಗಾಯಕನ ವಿರುದ್ಧದ ಪ್ರಕರಣ ಹಾಗೂ ಅವರ ಜಾಮೀನು ಬಿಡುಗಡೆಯ ಬೆಳವಣಿಗೆ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ .
