Ashwaveega News 24×7 ಫೆಬ್ರವರಿ 25 – 2026 ಬೆಂಗಳೂರು : ರಾಜ್ಯದ ಸಾವಿರಾರು ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಸುದ್ದಿ ಸಿಗುವ ಲಕ್ಷಣಗಳು ಕಂಡು ಬರುತ್ತಿವೆ. ನಾಳೆ ನಡೆಯಲಿರುವ ಸಂಪುಟ ಸಭೆಯಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ ಕುರಿತು ಪ್ರಮುಖ ಚರ್ಚೆ ನಡೆಯಲಿದ್ದು, ತಕ್ಷಣದ ನೇಮಕಾತಿಗಳಿಗೆ ಆದೇಶ ಹೊರಡಿಸುವ ಸಾಧ್ಯತೆ ಇದೆ .
ಈ ಕುರಿತು ಮಹತ್ವದ ಸುಳಿವು ನೀಡಿರುವ ಐಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರ ಯುವಕರ ಸಮಸ್ಯೆಯನ್ನು ಸಂಪೂರ್ಣವಾಗಿ ಅರಿತುಕೊಂಡಿದೆ ಎಂದು ಹೇಳಿದ್ದಾರೆ. ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೂ ಸ್ಪಂದಿಸಿದ್ದೇವೆ. ವಿರೋಧ ಪಕ್ಷದಲ್ಲಿದ್ದಾಗಲೂ ಯುವಕರ ಪರವಾಗಿ ಧ್ವನಿ ಎತ್ತಿದ್ದೇವೆ ಎಂದು ಅವರು ತಿಳಿಸಿದರು .
ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಈಗಾಗಲೇ 35 ರಿಂದ 40 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ. ಉಳಿದಿರುವ ಹುದ್ದೆಗಳ ನೇಮಕಾತಿಗೂ ನಾವು ಸಿದ್ಧರಿದ್ದೇವೆ. ಆದರೆ ಒಳಮೀಸಲಾತಿ ಸಂಬಂಧಿತ ಕೆಲವು ಕಾನೂನು ಸಮಸ್ಯೆಗಳು ಇರುವುದರಿಂದ ಅವುಗಳನ್ನು ಸರಿಪಡಿಸಿಕೊಂಡು ನೇಮಕಾತಿ ಪ್ರಕ್ರಿಯೆ ಮುಂದುವರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು .
ನಾಳೆ ನಡೆಯಲಿರುವ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಮುಖ ಅಜೆಂಡಾವಾಗಿದ್ದು, ಸಾಧ್ಯವಾಗುವ ಎಲ್ಲಾ ಹುದ್ದೆಗಳ ಭರ್ತಿಗೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಯಾರಾದರೂ ಕೋರ್ಟ್ ಮೊರೆ ಹೋದರೆ, ಅಂತಿಮ ತೀರ್ಮಾನ ನ್ಯಾಯಾಲಯದಲ್ಲೇ ಆಗಲಿದೆ ಎಂದು ಸಚಿವರು ಹೇಳಿದರು .
ಇದೇ ವೇಳೆ ವಯೋಮಿತಿ ಹೆಚ್ಚಳದ ವಿಷಯದಲ್ಲಿಯೂ ಸರ್ಕಾರ ಈಗಾಗಲೇ ತೀರ್ಮಾನ ಕೈಗೊಂಡಿದೆ. ಉದ್ಯೋಗಾಕಾಂಕ್ಷಿಗಳ ಹಿತದೃಷ್ಟಿಯಿಂದ ಎಲ್ಲಾ ಅಂಶಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು .
